Tuesday 28 March 2017

ಯುಗಾದಿ ಮತ್ತೆ ಬರಲಿ…

ಯುಗಾದಿ ನಿಮಿತ್ತ ಬರೆದ ನನ್ನ ಕವಿತೆ…

..ಮಹೇಶ ಕಲಾಲ ಯಾದಗಿರಿ


ಯುಗಾದಿ  ಮತ್ತೆ  ಬರಲಿ
ಭರವಸೆ  ಬೆಳಕು  ತರಲಿ

ಬೇವು ಬೆಲ್ಲವ ಬೆರಸಿ
ಪ್ರೀತಿ ಸ್ನೇಹ ಅರಸಿ
ಬರುವ ನವ ಜೋಡಿಗಳ
ಬಾಳಲಿ ಬೆಳಕು ತರಲಿ
ಮತ್ತೆ ಯುಗಾದಿ ಬರಲಿ
ಭರವಸೆ ಬೆಳಕು ತರಲಿ

ಬರವ ನೀಗಲಿ
ಬದುಕ ಸಾಗಲಿ
ಜನ ಜಾನುವಾರು
ಪ್ರಾಣ ಉಳಿಯಲಿ
ಕಾಯಕ ಯೋಗಿ
ಕೈಯ ಹಿಡಿಯಲಿ

ಅನ್ನದಾತನುಜಂಗೆ
ಅಕ್ಷರ ಸಿಗಲಿ
ಗನ್ನು ಹಿಡಿವ ಕೈ
ಪೆನ್ನು ಹಿಡಿಯಲಿ
ಅಕ್ಷರ ಕ್ರಾಂತಿಗೆ
ಮುನ್ನುಡಿಯಾಗಲಿ

ಅಂತ್ಯಜರ ನೋವ
ಕರಗಿಸುವ ಭಾವ
ಹುಟ್ಟಿ ಬರಲಿ ಶಿವ
ಭರವಸೆ ಬೆಳಕು ತರಲಿ
ಮತ್ತೆ ಯುಗಾದಿ ಬರಲಿ

ಉದ್ಯೋಗವ ಅರಸಿ
ಮಹಾನಗರವ ಸೋಸಿ
ಸೋತು ಬರುವ
ನೋವ ತರುವ
ಎದೆವ ನೋವ ಮರೆವ
ಮರೆತಂತೆ ತರುವ ಭಾವ

ಉದ್ಯೋಗ ಅರಸಿ
ಬರುವ ಯುವಕರಲ್ಲಿ
ನವ ಚೈತನ್ಯ ಬರಲಿ
ಸರ್ವರಿಗೆ ಉದ್ಯೋಗ ಸಿಗಲಿ
ನಿರುದ್ಯೋಗ ನಿವಾರಿಸಲಿ
ಭರವಸೆ ಬೆಳಕು ತರಲಿ
ಮತ್ತೆ ಯುಗಾದಿ ಬರಲಿ

ಅನ್ನದ ಆಹಾಕಾರ ಅಂತ್ಯ ಕಾಣಲಿ
ಹೆಣ್ಣಿನ  ಶೋಷಣೆಗೆ ಮುಕ್ತಿ ಸಿಗಲಿ
ಅಂಧರ ಬಾಳಲಿ ಬೆಳಕು ತರಲಿ
ಸುಂದರ ನಾಳೆ ಮತ್ತೆ ಬರಲಿ
ಮತ್ತೆ ಯುಗಾದಿ ಬರಲಿ
ಭರವಸೆ ಬೆಳಕು ತರಲಿ


Sunday 19 March 2017

ಸಂಕಲ್ಪದ ಸಂಕೋಲೆ

ನನ್ನ ಮೊದಲ ಕಥೆ
ಸಂಕಲ್ಪದ ಸಂಕೋಲೆ - ಮಹೇಶ ಕಲಾಲ ಯಾದಗಿರಿ
ಹಳದಿ ದೀಪ ಮಿನುಗುತ್ತಿದ್ದಂತೆ ರಘು ಕಿಟಾರನೆ ಕಿರುಚಿದ. ಹೊರ ಬಾಗಿಲ ಬಳಿ ಕುಳಿತಿದ್ದ ರಂಗಮ್ಮ ಮಗನಿಗೆ ಏನಾಯ್ತು ಎಂದು ಓಡೋಡಿ ಮನೆಯ ಒಳಗೆ ಬಂದಳು.
ಮಗ ಮೂಲೆಯಲ್ಲಿ ಒಬ್ಬನೆ ಏನೇನೋ ಎಣಿಸುತ್ತಿರುವಂತೆ ತಾನೋಬ್ಬನೆ ತನ್ನ ಬೆರಳನ್ನು ಹಿಂದೆ ಮುಂದೆ ಮಾಡುತ್ತಿರುವದನ್ನು ನೋಡಿ ರಂಗಮ್ಮನ ಮಾತೃ ಹೃದಯ ಕಿವಿಚಿದಂತಾಗಿ ಹಾಗೆ ನೆಲಕ್ಕುರುಳುವಂತೆ ಕುಳಿತುಬಿಟ್ಟಳು.
ಕೆಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ದಿನಾ ಸಂಜೆ ಕರೆಂಟ್ ಬರುವದು ರಘು ಹೀಗೆ ಚೀರುವುದು ರಂಗಮ್ಮನಿಗೆ ರೂಢಿಯಾಗಿದ್ದರು. ದಿನಾ ಹೊಸದರಂತೆ ಭಯಪಡುತ್ತಿದ್ದಳು. ಅವಳ ಭಯಕ್ಕಿಲ್ಲದ ಅಂತ್ಯಕ್ಕೆ ತತ್ತರಿಸಿದ ಆ ಜೀವ ಶೀವನೆ ಯಾಕಾದರೂ ನನ್ನ ಈ ರೀತಿ ಬದುಕಿಸಿದ್ದಿಯಾ ಎಂದು ಶೀವನಲ್ಲಿ ಕರುಣಾಭಾವದಿಂದ ಕೈಮುಗಿದು ಕುಳಿತಿದ್ದಳು.
ರಘು ರಘು ಬಾ ಮಗ ಎಲ್ಲಿದ್ದಿಯಾ ನಿನ್ನೆ ನಿಮ್ಮಪ್ಪ ಕೊಟ್ಟ ದುಡ್ನ ಕಳುವು ಮಾಡಿದೇನಾ ಪಲ್ಯಾ ತರಲಿಕ್ಕೆ ಬೇಕೋ ಅದು ಎಂದು ಒಂದೇ ಉಸಿರಿನಲ್ಲಿ ರಂಗಮ್ಮ ತನ್ನ ಮಗನಿಗೆ ಕರೆಯುತ್ತಿದ್ದಳು.
ಇಗಾ ಅದು ಎಲ್ಯಾದ ಅಂತ ಹೇಳ ಇಲ್ಲಂದ್ರ ನೀನಗ ಸಾಲಿಗೆ ಕಳಸಲಿಕ್ಕಾ ಡಬ್ಬಿ ತುಂಬಂಗಿಲ್ಲ ನೋಡ. ಉಪಾಸ ಇರಬೇಕಾಗತದ. ಎಂದು ಒಂದೇ ಸಮನೆ ತಾಯಿ ಮನೆಯ ಒಳಗಿಂದ ಕರೆಯುತ್ತಿದ್ದ್ರು. ರಘು ತಾ ಕುಳಿತಲ್ಲಿಂದ ಮೇಲೆಳಲೇ ಇಲ್ಲ. ಅವ ತನ್ನ ಆಟದಲ್ಲೆ ಮಗ್ನನಾಗಿದ್ದ.
ಹೊರಗಡೆಯಿಂದ ಬಂದ ರಂಗಪ್ಪ ಏ ರಘ್ಯಾ ನಿಮ್ಮವ್ವ ಅಷ್ಟು ಕರಿತಾಳ ಗ್ಯಾನ್ ಎಲ್ಲಿ ಆದಲೇ ನಿಂದು ಕಳ್ಳನನ್ನ ಮಗನೆ ಎಂದು ಹೊಡೆಯಲು ಬಡಿಗಿ ತೆಗೆದುಕೊಂಡು ಬಂದದನ್ನು ನೋಡಿದ ಕೂಡಲೇ ರಘು ಎದ್ದು ಮನೆಯೋಳಗೆ ಓಡಿದ. ಹೇ ಏನ್ ಮಾಡಲಕತ್ತಿದಿ ಅಲಾ ನೀರ್ ತಾಂಬ ಎಂದು ಹೆಂಡತಿಗೆ ದಬಾಯಿಸಿದ.
ಅಯ್ಯಾ ಏನ್ ಅಷ್ಟೊಂದು ಬಾಯ್ಬಡ್ಕಂತಿದಿ ಇರಾ, ಹುಡಗಾ ಇನ್ನ ಸಾಲಿಗಿ ಹೋಗಿಲ್ಲ. ಅವನಿಗೆ ಏನಾರಾ ಮಾಡಮಂದ್ರ ಮನ್ಯಾಗ ಪಲ್ಯಾನ ಇಲ್ಲ. ವಾದ್ ವಾರ ತಂದ ಪಲ್ಯಾನಾ ಇಲ್ಲಿತನಕ ಆಯ್ತ. ಈ ವಾರ ಸಂತಿಗಿ ಹೋಗಿ ತರಬೇಕಂದ್ರ ಮನ್ಯಾನ ಕೆಲಸ ಬಿಡಂಗಿಲ್ಲ ನೀಯಾರ ಮನಿಕೆಲಸ ಮಾಡದಕ್ಕಿಂತ ಮಂದಿ ಚಾಕ್ರಿ ಮಾಡತಿದಿ ಎಂದು ವಟಗುಟ್ಟುತ್ತ ನೀರ ತಂದ ಗಂಡನ ಕೈಯ್ಯಲ್ಲಿಟ್ಟಳು.
ಏ ನಿಮ್ಮಪ್ಪ ಆಸ್ತಿ ಕೊಟ್ಟಾನೇನಲೇ ಇಷ್ಟು ಮಾತಾಡತಿ ಎಂದು ರಂಗಪ್ಪ ಬುಸುಗುಟ್ಟಿದನು. ಆಹಾ ಆಸ್ತಿ ಕೊಡತಾನಾ ನೀನ್ ಮಾರಿಗಿ ನನ್ನ ಕೊಟ್ಟದ್ದ ಸಾಕಾಗ್ಯಾದ ತಗಾ ಉಣ್ಣುವಂತಿ ಬಾ ಹೊತ್ತಾಗ್ಯಾದ ಎಲ್ಲಿ ಚಾಕ್ರಿ ಮಾಡಕ್ಹೋಗಿದಿ ಎಂದು ಗಂಡನನ್ನ ದಬಾಯಿಸಿದಳು.
ಎಲ್ಲಿ ಇಲ್ಲಲೇ ಮುಂದಿನ ವರ್ಷ ನಮ್ ರಘುನಾ ಪಟ್ಣಕ್ ಸಾಲಿಗಿ ಹಾಕಬೇಕಲ್ಲ. ಗೌಡನ ಮಗಾ ಅಲ್ಲೆ ಸಾಲಿ ಓದತಾನಲ್ಲ ಅದಕಾ ಗೌಡರ ಮನಿಗಿ ಹೋಗಿದ್ದೆ ಎಂದು ಹೆಂಡತಿಗೆ ಹೇಳಿದ.
ಏನಂದ್ರ ಗೌಡ್ರು, ಎಂದು ನಡುವೆ ಬಾಯಿ ಹಾಕಿದಳು. ತಡಿಲೇ ಹೇಳೋ ಮಟ. ಮಗ ಅಂದ್ರ ಅಷ್ಟು ಬಹಳ ಪ್ರಾಣ ನೋಡ ನಿಂಗ. ಹಿಂಗಾದ್ರ ಸಾಲಿ ಕಲಸ್ಲಿಕ್ಕಾಗತಾದ. ಅಲ್ಲಾ! ಅಂವಾ ನನಗ ಒಬ್ಬ ಮಗ ಅಲ್ಲ ನಿನಗ ಕೂಡ ಮಗ ಅಂತ ಮರತಿಯೇನ್. ಎಳ್ಳವiವಾಸಿ ಹಬ್ಬಕ್ಕ ನಮ್ ಗೌರಾ ಬರ್ತಾಳಂತ. ಎನ್ನುತ್ತಲೆ ಯಾರೆಳಿದ್ರ ಅಂತ ಆಶ್ಚರ್ಯದಿಂದ ಕೇಳಿದ ರಂಗಪ್ಪ.!!
ಬ್ಯಾಡರ ಬಸ್ಸಪ್ಪ ಸಂತಿಗಿ ಹೋದಾಗ ಅಕಿ ಗಂಡಾ ಇಂವಾಗ ಬೇಟ್ಟ್ಯಾಗಿದ್ದನಂತ ಅವಾಗ ಹೇಳಿದ್ನಂತ. ಸಾಕ್ ಸಾಕ್ ಮಗಳ ಮಾತಿನಾಗ ಊಟಕ್ಕೇಳದ ಮರತ್ಯಲ್ಲ ಎದೇಳ ಉಂಡೋಗು ಎಂದು ತಡಬಡಸಿ ಎದ್ದಳು.
ಅನಿವಾರ್ಯತೆ ಮತ್ತು ಅತಂತ್ರ ಮನುಷ್ಯನಲ್ಲಿರುವ ಅಹಂಕಾರ ಮತ್ತು ಸಿಟ್ಟನ್ನು ಒಡೆದೋಡಿಸಿ ಅವನನ್ನ ಅಧಿರನ್ನಾಗಿಸುತ್ತದೆ ಎನ್ನುವುದು ನಿಜ.
ಕಳೆದ ಕೆಲವು ತಿಂಗಳ ಹಿಂದೆ ಯಾವುದೋ ಸಣ್ಣ ವಿಷಯಕ್ಕ ಮಾವನ ಮನೆಯಲ್ಲಿ ಹತ್ತಿದ ಜಗಳ ದೊಡ್ಡದಾಗಿ ನಡೆದಿತ್ತು. ಆ ಸಂದರ್ಭದಲ್ಲಿ ಶಿವಪ್ಪ ಮಾವನ ಮನೆ ಬಿಟ್ಟು ತನ್ನ ಹೆಂಡತಿನ ಕರೆದುಕೊಮಡು ಊರಿಗೆ ಹೋಗುವಾಗ ಈ ಜನ್ಮದಾಗ ನಿಮ್ಮ ಹೊಸ್ತಿಲ ತುಳಿಯಂಗಿಲ್ಲ ತಿಳಿರಿ ಎಂದು ಸಿಟ್ಟಿಲೇ ಹೋರಹೋಗಿದ್ದ. ಈಗ ಅನಿರ್ವಾತೆಯಿಂದ ಮಾವನ ಮನಿಗೆ ಹೋಗಲೇಬೇಕಾಗಿ ಬಂದಿದೆ.
ಮಗಳು ದೊಡ್ಡವಳಾಗಿ ಎದಿಮ್ಯಾಗ ಕುಂತಾಳ ಹೆಂಗಾರ ಮಡಿ ಅಕಿನ ಒಬ್ಬಾಕೀನ ಸಾಗ ಹಾಕಿದರ ಸಾಕಾ ಎಂದ ಹೆಂಡತಿ ಮಾತಿಗೆ ಶಿವಪ್ಪ ಸುಮ್ಮನೆ ಕುಳಿತಲ್ಲೆ ತಲೆಯಾಡಿಸಿದ.
ಅಲ್ರಿ ಸುಮ್ಮನೆ ಕುಂತಿರಲ್ಲ ಮಾತಾಡ್ರಿ ಅಂತ ಹೆಣ್ತಿ ಅಂದಾಗ ಅಲ್ವೆ ನಮ್ಮ ಸ್ವಾರ್ಥಕ್ಕ ಪರರನ್ನ ಅಷ್ಟೆ ಏಕೆ ನಮ್ಮವರನ್ನು ಕೂಡ ಸಮಯಕ್ಕೆ ಸರಿಯಾಗಿ ಬಲಿಕೋಡಬೇಕಾಗುತ್ತದಲ್ಲ ಎಂಬ ಚಿಂತೆ ನನಗೆ ಎನ್ನುವ ಗಂಡನ ಮಾತು ಕೇಳಿ ಕ್ಷಣಕಾಲ ದಿಗ್ಬ್ರಾಂಥಳಾಗಿ ಅಲ್ರಿ.
ನಾವೇನು ಅವರಿಗೆ ಮೋಸ ಮಾಡ್ಲಿಕತ್ತಿಲ್ಲವಲ್ಲ. ನನ್ನ ಮಗಳು ಗೌರಮ್ಮ ಆಗ್ಯಾಳ. ಇನ್ನ ನೋಡಿದ್ರ ನಮ್ಮ ರಘುನಾ ಅವಳಿಗೆ ಒಪ್ಪಲ್ಲ. ಯಾಕ ನಮ್ಮಪ್ಪನ ಆಸ್ರಿ ಬ್ಯಾರೆಯೋರಿಗೆ ಆಗುತ್ತಲ್ಲ. ಅಂತ ಮನಸ ಮಾಡಿನಿ ಅಂದ ಹೆಣ್ತಿ ಮಾತಿಗೆ ಸುಮ್ಮನೆ ಮುಗುಳ್ನಕ್ಕ.
ಹೇ ಈ ಸರತಿ ಊರಿಗಿ ಹ್ವಾದ ಮ್ಯಾಲ ನಿಮ್ಮಪ್ಪ ಅವ್ವನ ಜೋಡಿ ಮಾತಾಡಿ ಬಾ ನೋಡ. ಇಲ್ಲಂದ್ರ ನಮ್ಮ ಸಂಗುಗಾ ಬ್ಯಾರೆ ಕಡೆ ವರ ನೋಡಿತಿನಿ ನೋಡ ಎಂದು ಶಿವಪ್ಪ ತನ್ನ ಹೆಂಡತಿ ಗೌರಮ್ಮನಿಗೆ ಹೇಳುತ್ತಿದ್ದಂತೆ.
ಅಲ್ರಿ ನಾನೆ ಆ ಮಾತಂದ್ರ ನೀ ಸ್ವಾರ್ಥ ಗೀರ್ಥ ಅಂತಂದ್ರಿ ಈಗ ನಿವೇ ಇಂಗಂತಿರಲ್ಲ ಅಲ್ವೆ ಹಾಗೆ ಅನ್ನೋದು ಮತೆ ಹೇಳಾಕ ಆಚಾರ ಅನ್ನೋದು ಬದನೆಕಾಯಿ ತಿನ್ನೋದು.
ಮೊದ್ಲ ಆ ಕೆಲಸ ಮಾಡ್ ನೋಡು ಇಲ್ಲಂದ್ರ ಕೈಮಿರಿ ಹೋಗತಾದ. ತಡರ್ರಿ ಯಾಕ್ ಹಂಗ ಮಾಡತಿರಿ ಈಗೇನ್ ಅಕಿ ದೊಡ್ಡಾಕಿ ಆಗಿ ಇನ್ನ ತಿಂಗಳ ಕಳಿದಿಲ್ಲ. ಅಲ್ಲಲೇ ಹುಚ್ಚುಕ್ವಾಡಿ ಹೀಗ್ಯಾ ಹೇಳಿಡದಪಾ ಮುಂದಿನ ವರ್ಷ ಮದವಿ ಮಾಡಲಿಕ್ಕಾಗತದ ಇಲ್ಲಂದ್ರ ನಿಮ್ಮಪ್ಪ ರಘುಗ ಪಟ್ನಕಾ ಸಾಲಿಗಿ ಹಾಕತಾನಂತ ಮೊನ್ನಿ ಸಂತ್ಯಾಗ ಬ್ಯಾಡರ ಬಸ್ಸಪ್ಪ ಹೇಳಿದ.
ಛಲೋ ಆತಲಾ. ಏನ್ ಛಲೋ ಆತು ಅವ ಪಟ್ನಕ್ ಹೋಗತಾನ ಅಲ್ಲಿ ಸಿಟಿ ಹುಡಿಗಿ ಹಿಂದ ಬಿದ್ದ ನಿನ್ನ ನಿನ್ನ ಮಗಳನಾ ಯಾರಂತ ಕೇಳತಾನ ಅವಗ ಏನ್ ಮಾಡ್ತಿ. ಅವಿವೇಕಿನ ತಂದು. ಮೊದ್ಲ ಊರಿಗಿ ಹೋಗ ನಾಳೆ ಎಂದು ಶಿವಪ್ಪ ಹೆಂಡತಿಯ ಕಿವಿಯೂದಿದ. ಆತರಿ. ಇಲ್ಲಂದ್ರ ಎಲ್ಲ ಕೆಟ್ಟಹೋಗತಾದ ನೋಡ್ರಿ ಎಂದಳು.
ಏವ್ವಾ ಅಕ್ಕ ಬಂದಳಾ ನೀರ ತಾಂಬ. ಯಾಕ ರಘಪಾ ನೀ ದೊಡ್ಡಂವಾ ಆಗಿಯೇನ್ ನೀ ನೀರ್ ತರದಬಿಟ್ಟು ಅವ್ವಂಗ ಹೇಳಿತಿ. ಲಗ್ನಕ್ ಬಂದಿಪ. ಎಂದು ಅಕ್ಕ ಮಗನಿಗೆ ದಬಾಯಿಸೊದು ನೋಡಿ. ಏ ಗೌರವ್ವಾ ನಿಂಗ ಅವನ ಲಗ್ನದ ಚಿಂತಿ ನೋಡ. ಬ್ಯಾಡ ಬ್ಯಾಡ ಅಂದ್ರ ನಾಕ್ ಹೆಣ್ಣ ಹಡದಿ ಕುಂತಿ. ಈಗ ಪಾರಗ ಲಗ್ನಗಿಗ್ನ ಅಂತ ತಲಿ ತುಂಬಸಾಕ ಬಂದೇನ್. ಎನ್ನುತಾ ಅವರವ್ವ ರಂಗಮ್ಮ ಹೊರಬಂದಳು.
ಯಾಕಂಗೆ ಇವಂಗ ಲಗ್ನ ಮಾಡಲ್ಲೇನ್ ಮತಾ. ಇಲ್ಲವಾ ಅವರಪ್ಪ ಅವಂಗ ಪಟ್ನಕಾ ಸಾಲಿಗಿ ಹಾಕ್ತನಂತ. ಅಲ್ಲಿ ಸರಕರ ಹಾಸ್ಟೇಲ್ ಆದ ಎಲ್ಲ ಫ್ರಿ ಅಂತ ಗೌಡರ ಹೇಳ್ಯಾರಂತ ಅದಕಾ ಗೌಡರ ಮನಿಗಿ ಹೋಗ್ಯಾನ ನಿಮ್ಮಪ್ಪ. ಕರೆಕ್ಟ್ ಟೈಮಿಗಿ ಬಂದಿನಿ ನೋಡ ನಾ ಇಲ್ಲಂದ್ರ ನನ್ ಗಂಡಂದಂಗ ಇವ್ರ ಕೆಲಸ ಕೆಡಿಸಿಡತಿದ್ರ ಅಂತ ಮನಸಿನ್ಯಾಗ ಲೆಕ್ಕ ಹಾಕಿದ ಗೌರಮ್ಮ. ಏ ರಘು ಅಪ್ಪನಾ ಕರದಬಾ ಹೋಗೋ. ಅಂದಳು.
ಹೇ ಇನ್ನ ಇರತಿಯಲ್ಲ ಬರಲಿಬಿಡು ರಾತ್ರಿ ಬರತಾನಾಲ್ಲ ಅವಗ ಮಾತಾಡವಂತಿಗಿ ಎಂದ ಅವರವ್ವನ ಮಾತ ಕಿವಿಗಿ ಹಾಕಿಕೊಳ್ಳದೆ. ಹೋಗು ಅಕ್ಕ ಬಂದಾಳ ಅಂತ ಹೇಳ. ಅತಗಾ ನನಗಿಂತ ಕೆಲಸ ಜಾಸ್ತಿ ಏನ್ ಎಂದು ತಮ್ಮನ ದಬಾಯಿಸಿದಳು.
ಯಾಕವಾ ಗೌರವ್ವ ಇಷ್ಟ ಜಲ್ದಿ ಬಂದ್ಯಲಾ ಮತ್ತೇನ ಲೆಕ್ಕಾ ಹಾಕ್ಕೊಂಡ ಬಂದಿ ಅಸಾಲಿ ಬಂದಾಗ ಜ್ವಾಳ ಇಲ್ಲಂತ ಜ್ವಾಳ ವೈಯಿದಿ. ಈಗ ಏನ್ ಬೇಕ. ರೊಕ್ಕಗಿಕ್ಕ ನಮ್ಮಲ್ಲಿ ಇಲ್ಲ ನೋಡವಾ ನಮ್ಮಗಾ ಮಗನ್ ಸಾಲಿಗಿ ರೊಕ್ಕಿಲ್ಲ. ಗೌಡರಂತ್ಯಾಕ ಸಾಲ ಕೇಳಿ ಬಂದಿನಿ ಎನ್ನುತ್ತಾ ಮನೆಯ ಒಳಗಡೆ ಬಂದನು.
ರೊಕ್ಕ ನನ್ಗಂಡನಲ್ಲಿ ಬಾಳ ಅದಾಂವಾ ನಿ ಏನ್ ಕೊಡದಾ ಬ್ಯಾಡ ನೋಡ. ನಾವ ನಿನಗ ಕೊಡತಿವಿ. ಹಂಗಾರ ಕೊಡ ಮತ್ಯಾ ಗೌಡನಲ್ಲ್ಯಾಕ ಸಾಲ ಮಾಡದ ಬಡ್ಡಿಗಿಡ್ಡಿ ಅಂತ ಬಾಳ್ ತ್ರಾಸ್ ಆಗತಾದ ನಮಗಾ ಎಂದು ತನ್ನ ನೋವನ್ನು ರಂಗಪ್ಪ ಮಗಳ ಹತ್ತಿರ ತೊಡಿಕೊಂಡನು.
ಏನಪ್ಪ ನೀನು ಇಷ್ಟು ವಿಷಯಕ್ಕೆಲ್ಲ ಕಣ್ಣಿರು ತೆಗಿತಿಯಲ್ಲ. ಅಷ್ಟಕ್ಕ ನಾವಿಲ್ಲೇನು. ಯಾಕ್ ಚಿಂತಿ ಮಾಡ್ತಿದಿ, ಹೆಂಗೊ ನಿನ್ನ ಅಳಿಯ ಹಬ್ಬಕ ಬರ್ತಾನಲ್ಲ ಏನಾರ ಒಂದು ವಿಚಾರ ಮಾಡೋಣಂತ ಎಂದು ಸಮಸ್ಯೆ ಬಗೆಹರಿಸುವದರ ಜೊತೆ ತನ್ನ ಬಯಕೆ ಇಡೇರಿಸಿಕೊಳ್ಳುವ ವಿಚಾರವನ್ನು ನಿಧಾನವಾಗಿ ಗೌರವ್ವ ತನ್ನ ತಂದೆ ಹತ್ತಿರ ಬಿತ್ತರಿಸಿದಳು.
ರಾತ್ರಿ ಊಟ ಮಾಡಿ ಮಲಗುವ ವೇಳೆ ತಂದೆಯ ಹತ್ತಿರ ಬಂದ ಕುಳಿತ ಗೌರವ್ವ ಎಪ್ಪಾ ಹೆಂಗೋ ರಘು ದೊಡ್ಡವ ಆಗ್ಯಾನ ನನ್ ಮಗಳು ದೊಡ್ಯಾಕಿ ಆಗ್ಯಾಕತ್ಯಾಳ. ಇದೇ ವೇಳೆದ್ಯಾಗ ನಾವ್ ಯಾಕ ಅವರಿಗೆ ಲಗ್ನ ಮಾಡಬಾರದು ಎಂದು ಸಣ್ಣಗೆ ದನಿ ಎತ್ತಿದಳು.
ಅಲವಾ ಗೌರವ್ವ ನಾ ಇನ್ನ ಅವನಿಗೆ ಓದಿಸಬೇಕು ಅಂತ ಮಾಡಿನಿ ನೀ ನೋಡಿದ್ರ ಅವನಿಗೆ ಲಗ್ನ ಗಿಗ್ನ ಅಂತ ತಲೆ ತುಂಬೊ ವಿಚಾರ ನಡಿಸಿಯಲ್ಲ. ಅಲ್ಲಪ್ಪ ಹೆಂಗೊ ನಿನಗೂ ರೊಕ್ಕದ ಸಮಸ್ಯೆ ಆದ ಆದ್ರ ಇಬ್ರಿಗಿ ಲಗ್ನ ಮಾಡಿದ್ರ ನಾವು ಅಲ್ಲೆ ಬೆಂಗಳೂರಿನ್ಯಾಗ ನಮ್ಮ ಮಗಳ ಜೋಡಿನಾ ರಘುಗ ಕೂಡ ಸಾಲಿ ಕಲಸ್ತಿವಿ. ಅವಾ ನನ್ನ ತಮ್ಮ ಅಲ್ಲೇನು. ಹೆಂಗಿದ್ರೂ ನಮ್ ಸಂಗುಗಾ ಅವನಿಗೆ ಕೊಡಬೇಕು ಅಂತ ಹೆಸರಿಟ್ಟಿವಲ್ಲ. ಇಬ್ರುನು ಓದಿಸ್ತಿವಿ ಏನಂತಿ? ಮಗನಿಗೆ ಓದಿಸುವ ನಿನ್ನ ಆಸೆನೂ ಇಡೇರುತ್ತೆ. ಈಗ್ಲೆ ಮಕ್ಕಳ ಲಗ್ನನೂ ಮಾಡಿದಂಗ ಆಗುತ್ತದಲ್ಲ. ಅದು ಸರಿಯವ್ವ ನಿಮ್ಮವ್ವ ಏನಂತಳೇನು. ಹೇ ಅಕಿ ಏನಂತಳಾ ಬಿಡಪಾ ಅಕಿನಾ ಒಪ್ಪಿಸೋ ಜವಾಬ್ದಾರಿ ನನಗಾ ಬಿಡು ಅಂದು ಮಲಗಲು ಎದ್ದು ಹೋದಳು.
ಏನ್ ರಂಗ ಮಗನಾ ಸಾಲಿಗಿ ಹಾಕಕ ರೊಕ್ಕ ಬೇಕು ಅಂದು ಈಗ ಮಗನಿಗೆ ಲಗ್ನ ಮಾಡಕತ್ತಿದಿಯಂತಲ್ಲ. ಇಲ್ರೀ ಗೌಡ್ರಾ. ಹೆಂಗೋ ನಮ್ಮ ಗೌರವ್ವನ ಮಗಳನಾ ಅವನಿಗಿ ತೆಗಿಬೇಕು ಅಂತ ಮಾಡಿದ್ದಿವಿ. ಅವರು ಬೆಂಗಳೂರನಲ್ಲಿರುತ್ತಾರಲ್ಲ ಈ ಹಬ್ಬಕ್ಕ ತಮ್ಮೂರಿಗಿ ಬಂದರಾ. ಒಮ್ಮಿಗೆ ಲಗ್ನ ಮಾಡಿಕೊಂಡು ಹೋಗ್ತಿವಿ ಅಂದ್ರು ಇಬ್ರು ಮಕ್ಕಳಿಗಿ ಅಲ್ಲೆ ಸಾಲಿ ಕಲಿಸ್ತಿವಿ ಅಂದ್ರ ಅದಕಾ ತಡ ಯಾಕ ಮಾಡೋದು ಅಂತ ಲಗ್ನ ಹಿಡದಿವಿ ಗೌಡ್ರ. ಸರಿಯಪ್ಪ ನಿನಗ ತಿಳದಂಗ ಮಾಡು. ರೊಕ್ಕ ಏನಾರ ಬೇಕಿದ್ರ ಮನಿಕಡಿ ಬಾ. ಎಂದು ಗೌಡ್ರು ಹೇಳಿ ಮನೆಕಡೆ ಹೊದರು.
ಹೇ ನೀರಿಗಿಟ್ಟಿನಿ ಬರ್ರಿ ಜಲ್ದಿ ಹೊತ್ತಾಗ್ಯಾದ ಊಟ ಮಾಡಾದಿಲ್ಲ ಅಂತ ಗೌಡಶ್ಯಾನಿ ಮನೆಯೊಳಗಿಂದ ಕರೆದಳು.
ಹೇ ತಡಿಲೇ ಸ್ವಲ್ಪ ಆ ರಂಗಪ್ಪ ಬರತೀನಿ ಅಂತ ಹೇಳ್ಯಾನ. ಯಾಕಂತ ಹೇ ಇರತಾವಲೇ ಕೆಲಸ ಹೊಲದ ಬಾಜು ಹೊಲ ಆದಾವ ಒಬ್ಬರಿಗೊಬ್ಬರು ಸಮಯಕ್ಕೆ ಸರಿಯಾಗಿ ಆಗ್ಲಿಲ್ಲ ಅಂದ್ರ ಹೆಂಗ.
ಪ್ಯಾಲಿ ಉಚ್ಚಪ್ಯಾಲಿ ನಿನಗೇನು ಗೊತ್ತಾಗತದ. ಬರಿ ಉಣ್ಣೋದು ನಿಮ್ಮಪ್ಪನ ಮನಿ ಉದ್ರಿ ಪೌರುಷ ಹೇಳ್ಕಾಂತ ಕುಂಡ್ರೊದು. ಅದು ಬಿಟ್ರ ನಿನಗೇನ್ ಗೊತ್ತಾದಲೇ ಅರಿವಿಲ್ಲದ್ಯಾ.
ಆ ಗೋತ್ತತ್ ಬಿಡ್ರಿ ನಮ್ಮಪ್ಪಗ್ ಒಂದ್ ದಾರಿ ಕಾಣಿಸಿದ್ರಿ ಈಗ ಅಂವ ರಂಗಪ್ಪ ಹುಚ್ಚ ನಿನ್ನ ಕೈಯಾಗ ಸಿಕ್ಕನಾ ಅವನ ದೇವರೇ ಕಾಪಾಡಬೇಕು.
ಶಿವ ಶಿವಾ ರಂಗಾ.
ಹೆಂಗಾರ ಮಾಡಿ ಒಂದಿಷ್ಟು ಸಾಲ ಕೊಟ್ಟಂಗ ಮಾಡಿ ರಂಗಪ್ಪನ ಮಗನ ನಮ್ಮ ಹುಡುಗನಗೂಡ ಜತಿಗೆ ಸಾಲಿಗೆ ಹಾಕಿಸಿದ್ರ ನಮ್ಮ ಹುಡುಗಂಗೆ ಜತಿನಿ ಆತು ಅವನಿಗೆ ಗೆಳೆಯ ಸಿಕ್ಕಂಗಾತು. ಅವನಿಗೆ ಸಾಲ ಕೊಟ್ರ ಯಾವಾಗಾರ ಕೂಲಿ ನಾಲಿಗಿ ಅಂತ ಒಂದ್ ಆಳ್ ಸಿಕ್ಕಂಗಾತು.
ಈಗಬ್ಯಾರಿ ಕೂಲಿ ಆಳು ಸಿಗುವಲ್ಲವು ಕೊಟ್ಟ ಸಾಲ ಎಲ್ಲಿಗಿ ಹೋಗತಾದ ಬಡ್ಡಿ ಸಮೇತ ಬರತಾದ. ಅವರು ಬಹಳ ಸಂಭಾವಿತ ಮಂದಿ ಆದಾರ.
ಇಲ್ಲಂದ್ರ ನಮ್ಮ ಹೊಲದ ಬಾಜುನೇ ಅವನ ಹೋಲ ಆದ ಇನ್ನೊಂದಿಷ್ಟು ಅವನಿಗೆ ರೊಕ್ಕ ಕೊಟ್ಟ ಆ ಹೊಲನಾ ನಾವೇ ತಗೊಂಡ್ರಾತು.
ಎರಡು ಹೊಲ ಕುಡಿಸಿದ್ರ ಕುದ್ರಿ ಓಡೋಂಗ ದೊಡ್ಡ ಹೊಲ ಆಗತಾದ.
ಅಂತ ಗೌಡ ವಿಚಾರ ಮಾಡ್ತ ಕುಳಿತಿದ್ದ.
ಏ ಗೌರಿ ದನಬಿಡೋ ಒತ್ತಾಯ್ತು ಎಲ್ಲಿ ಹಾಳಾಗಿ ಹೋಗಿದ್ದಿ ಜಲ್ದಿ ಗೂಟಕ್ಕ ಕಟ್ಟಿದ್ದ ದನ ಬಿಡು ಕತ್ತೆ. ಹೊತ್ತು ನೆತ್ತಿಗಿ ಏರಕತ್ಯಾದ ಗೋತ್ತಾಗಲ್ಲೇನ್ ಅಂತ ದನಕಾಯೋ ಹುಡುಗಿಗೆ ದಬಾಯಿಸಿದ ಗೌಡಸ್ಯಾನಿ ಮನೆಯೊಳಗೆ ಹೋದಳು.
ಹೇ ಬಾರಪಾ ರಂಗ ನೀ ಬರತಿನಿ ಅಂದದಕಾ ನಾ ಕಾಯ್ತಿದ್ದೆ ಇಲ್ಲಂದ್ರ ನಿಮ್ಮ ಗೌಡಶ್ಯಾನಿ ಊಟಕ್ಕ ಬಾ ಅಂತ ಆಗ್ಲೇ ಒಂದ್ ಅವಾಜ್ ಹಾಕಿ ಹೋಗ್ಯಾಳ ಬರಿ ಉದ್ರಿ ಚಾಕ್ರಿ ಮಾಡ್ತಿದಿ ನೀ ಅಂತ ಸಿಟ್ಟಿಗೇರಾಳಲೇ.
ಹೇ ಬಿಡ್ರಿ ಗೌಡ್ರಾ ನಮ್ಮವ್ವ ಅಂತಾಕಿ ಅಲ್ರಿ. ನಾ ಎಷ್ಟು ದಿನದಿಂದ ನೋಡ್ತಿನಿ ನೀವಾ ಅವ್ವಾರಿಗಿ ಅವರ ತೌರಮನಿಗಿ ಬಯ್ತಿರಿ.
ಅಲ್ಲಲೇ ಕೋಡಿ ರಂಗ ಅದ್ ಬಿಡು ನಮ್ಮನಿ ವಿಷ್ಯಾ. ನೀ ಬಂದ್ಯಲಾ ಯಾಕ.
ಏನಿಲ್ಲರಿ ಗೌಡ್ರಾ ನಮ್ಮ ಸಂಗವ್ವ ಬಂದಾಳಲ್ಲಕ ಮತ್ತೆ ಅದಕೆ ಮನಿಗಿ ಹೋಗಿದ್ದ ಆಕಿ ತನ್ನ ಮಗಳನ್ನ ಕೊಡ್ತನಿ ಅಂತ ಬಂದಾಳ. ಯಾರಿಗಿ ಲೇ ನಿನಗಾ ಹೇ ಬಿಡ್ರಿ ಗೌಡ್ರಾ ನಿಮಗ್ ಇಷ್ಟು ವಯಸ್ಸಾದ್ರೂ ಇನ್ನ ರಸಿಕರಂಗ ಮಾತಾಡತಿರಿ. ಅಲ್ಲಲೇ ಕೋಡಿ ಮರ ಮುಪ್ಪಾದರ ಹುಳಿ ಮುಪ್ಪಾಗತದ ಏನಲೇ.
ಹಂಗಲ್ರಿ ಗೌಡ ನಮ್ಮ ರಘುಗಾ ಕೊಡ್ತಾಳಂತ
ರಂಗಪ್ಪನಾ ಮಾತು ಕೇಳಿ ಗೌಡ ಒಂದು ಕ್ಷಣ ದಂಗಾಗಿ ಹೋದ. ಯಾಕಂದ್ರ ಏನೇನೋ ಲೆಕ್ಕಾಚಾರ ಹಾಕಿಕೊಂಡು ಕುಳಿತಿದ್ದ ಎಲ್ಲಾ ತಲೆಕೆಳಗಾಗಿ ಹೋಯ್ತು ಅಂತ ಗೌಡನ ಭಾವನೆ.
ಆಶ್ಚರ್ಯಭಾವದಿಂದ ಅಲ್ಲ ರಂಗ ನಿನ ಮಗನಾ ಸಾಲಿಗಿ ಹಾಕ್ತಿನಿ ರೊಕ್ಕಬೇಕು ಅಂದಿದಿ ಅಂತ ಸಣ್ಣಗೆ ರಾಗ ತೆಗೆದ ಗೌಡನ ಮುಖ ನೋಡಿ ರಂಗಪ್ಪ ರೊಕ್ಕ ಬೇಕ್ರಿ ಗೌಡ್ರಾ ಆದ್ರ ಸಾಲಿಗಿ ಅಲ್ಲ ಮತ್ತಾ ಯಾಕಲೇ ಲಗ್ನಾಕಾ.
ಲಗ್ನ ಮಾಡಿಕೊಟ್ರ ಸಾಕಂತ್ರಿ ಅವರೇ ಅಳ್ಯಾಗ ಮಗಳಿಗಿ ಓದಿಸ್ತಾರಂತ.
ಹೌದಾ?
ಎಲ್ಲಿ ತಾನು ಹಾಕಿದ್ದ ಲೇಕ್ಕಾಚಾರ ತಲೆಕೆಳಗಾಗತದ ಅಂತ ಮಂಕಾಗಿದ್ದ ಗೌಡನಿಗೆ ಬರಡು ಭೂಮ್ಯಾಗ ನೀರಿನ ಬಸಿ ಹೊಂಟಂಗಾಯ್ರು.
ಸರಿ ಎಷ್ಟು ಬೇಕಾಗಬಹುದಪ್ಪಾ ಲಗ್ನ ಸ್ವಲ್ಪ ಬಹಳ ಬೇಕಾಗಬಹುದುರಿ ಸರಿ ಸರಿ ನೋಡೊಕೊಂಡು ಲೆಕ್ಕಾ ಮಾಡಿಕೊಂಡು ಬಾ ಆಹಾ ಒಂದ್ ವಿಷ್ಯ ತಿಳ್ಕೊ ನಿಮ್ಮ ಮನ್ಯಾಗ ಕೇಳಿ ಸಾಲ ಮಾಡ್ ಸಾಲದ ಪತ್ರಕಾ ನಿನ್ನ ಹೆಂಡತಿ ಮಗ ಸಹಿ ಹಾಕಬೇಕು.
ಹೇ ಗೌಡ್ರಾ ಹೋಲಾನ ಬರದಕೊಡ್ತಿನಿ ನೀ ನಮ್ಮಪ್ಪ ಇದ್ದಂಗ ನಮ್ಮೂರ ಧಣಿ ಇದ್ದಿರಿ. ನಿಮ್ಮ ಸಾಲಕ್ಕ ಎದುರಾಗಿ ನಾವು ಬಾಳವು ಮಾಡಿಲ್ಲಿಕ್ಕಾಗತದಾ.
ಅಲ್ಲಲೇ ಈಗ ಕಾಲ ಬಹಳ ಕೆಟ್ಟುಹೊಗ್ಯಾದ. ನೀ ಇದ್ದಂಗ ನಿನ್ನ ಮಗ ಇಲ್ಲಲೇ ಕಾಲಕ್ಕ ತಕ್ಕಂಗ ನಾವ್ ನಡಿಬೇಕಲ್ಲ. ಆಯ್ತು ಬಿಡ್ರಿ ಗೌಡ್ರ ನಾ ಬರತಿನಿ ಹಂಗಾರ ಗಟ್ಟಿ ನೋಡ್ರಿ.
ಮದುವ್ಯಾಗ ನಡದ ಒಂದ್ ಸಣ್ಣ ಘಟನೆ ಎರಡು ಮನಿ ಇಬ್ಬಾಗ ಮಾಡಿತ್ತು. ಮದುವೆ ಬಟ್ಟಿ ತರಲ್ಲಾಕ ಬಟ್ಟಿ ದುಖಾನ್ಗೆ ಹೋದಾಗ ಮದುವಿ ಹೆಣ್ಣಿನ ಸೀರಿ ತಗೋದ್ರಾಗ ಇಬ್ರಿಗೂ ಪಸಂದ ಬರಲಾರದ ಒಣ ಪ್ರತಿಷ್ಠೆಗೆ ಬಿದ್ದು ಒಬ್ಬರಿಗೊಬ್ಬರು ಮಾತಾಡಲಾರದ ಅಂಗಡಿಯಿಂದ ಎದ್ದು ಬಂದಿದ್ರು. ಅಲ್ಲಿ ಸುರುವಾದ ಜಗಳ ಮದುವೆ ಮನಿವರೆಗೆ ನಡೆದು ಕಡಿಗೆ ಮದಿವ್ಯಾಗ ಬೀಗರಿಗೆ ನಾಸ್ಟ ಹಾಕಿಲ್ಲ. ಊಟ ಸರಿಗಿ ಮಾಡಿಲ್ಲ ಅಂತೇಳಿ ಮದುವೆ ಹೆಣ್ಣನ್ನ ಬಿಟ್ಟು ತಾಳಿ ಸಮಯದಲ್ಲಿ ಎಲ್ಲ ಬೀಗರು ನೆಂಟರು ಎರಡು ಭಾಗ ಆಗಿ ಯಾರ್ ಊರಿಗಿ ಅವರು ಹೋಗಿಬಿಟ್ಟರು.
ಆಗ ಹೆಂಗೋ ಮದುವಿ ಮುಗಿಸಿ ಮಗಳನ್ನ ಕರೆದುಕೊಂಡು ಮನಿಗಿ ಬಂದವರು ತಿರುಗಿ ಮತ್ತೆ ಮಗನ ಗಂಡನ ಮನಿಗಿ ಕಳಸ್ಲೆ ಇಲ್ಲ.
ಅಲ್ಲಪಾ ನಿಮ್ಮಪ್ಪ ಲಗ್ನ ಸಾಲದಸಲುವಾಗಿ ಆ ಗೌಡಗ ಹೊಲ ಬರದ ಕೊಟ್ಟಾನಂತಲ್ಲ. ನೀ ಎಷ್ಟೊಂದು ಹೇಳಿದಿ. ನಮ್ಮಪ್ಪನ್ ಆಸ್ತಿ ಬೇರೋರಿಗೆ ಆಗ್ತಾದ ಅದಕ್ಕಾ ಇದಕಾ ಅಂತ ಹೀಗೇನಾಯ್ತು. ಹೊಲಕ ಹೊಲ ಹೋಯ್ತು. ಹೊಲ ಇಲ್ಲದವನ ಮನಿಗಿ ಮಗಳನಾ ಕೊಟ್ಟಂಗಾಯ್ತು.
ಅದಕಾ ಹೇಳೋದು ಮೂರ್ಕಾಸಿನ ಹೆಣ್ಣ ಅಂತ. ಮೊಳ್ಕಾಲ್ ಕೆಳಗಿನ ಬುದ್ದಿ ನಿಮ್ದು ಅಂತ.
ಅಂವಾಗ ನಿನ್ನ ಬುದ್ದಿ ಎಲ್ಲಿಗೋಗಿತ್ತು ಸಗಣಿ ತಿಂತಿತ್ತಾ ನನಗಾ ದುರಾಸಿ ನಿಮ್ಮನ ಆಸ್ತಿ ಅದು ಇದು ಹಾಳು ಮೂಳ್ ಅಂತ ಅವತ್ತು ಸಂತಿಲಿಂದ ಬಂದ್ ತಲಿ ತುಂಬಿ ನೀ ಈಗ ನನಗಾ ಜೋರ್ ಮಾಡ್ತಾನ.
ನಿನ್ನ ಮಗಳು ಮಣಿಪುರದ ರಾಜಕುಮಾರಿ ನನ್ನ ತಮ್ಮ ನೋಡಲಾರದ ಬಂದ್ ಮದುವ್ಯಾಗ್ಯಾನ. ಮದ್ವಿ ಆಗಿ ಆರು ತಿಂಗಳಾತು ಗಂಡೆಂಬ ಜ್ಞಾನ ಇಲ್ಲ. ಬಣ್ಣ ಮಾಡಿಕೊಂಡ್ ಬೀದಿ ಬೀದಿ ತಿರುಗುತಾಳ. ಇಂತಕಿನಾ ಅವನಿಗೆ ಗಂಟ್ಹಾಕಿ ಅವನ ಬಾಳ್ ಹಾಳ್ ಮಾಡಿದಿ ಅಂತ ಒಂದೇ ಸಮನೆ ರಪರಪನೆ ಮಳಿ ಬಂದಂಗ್ ಹಾರಾಡಿದಳು.
ಅಲ್ಲ ಆಕಡಿ ಹುಡುಗುನ ಸಾಲಿ ಆಗಲಿಲ್ಲ ಈ ಕಡಿ ಮನಿಗಿ ಸೊಸಿ ಬರ್ಲಿಲ್ಲ ಎಂಬ ಚಿಂತಿ ರಂಗಪ್ಪನಿಗೆ ಕಾಡಹತ್ತಿತು.
ಇತ್ತ ಹೊಲ ಹೋಯ್ತು ಆ ಕಡಿ ಮಗನಾ ಸಾಲಿ ಹಾಳಾಯ್ತು ಮನಿಗಿ ಸೊಸಿ ಬರಲಾದ ಮಗನಾ ಬಾಳ್ ಹಾಳಾಯ್ತು. ಇರೋ ಒಬ್ಬ ಮಗಳು ಮನಿಯಿಂದ ದೂರಾದಂಗಾಯ್ತು ಅಂತ ರಂಗಪ್ಪ ಅದೇ ಕೊರಗಿನಲ್ಲಿ ತೀರಿಹೋದ.
ಒಂದ್ ಕಡಿ ತಂದಿ ಸಾವು ಲಗ್ನ ಆದ್ರ ಹೆಂಡತಿ ಮುಖ ನೋಡಲಾರದ ನೋವು. ಇದ್ದ ಒಬ್ಬ ಅಕ್ಕ ಮನಿಗಿ ಬರದಂಗಾಯ್ತು ಬದುಕಾಕ ಇದ್ದ ಹೋಲ ಗೌಡನ ಪಾಲಾಯ್ತು. ಅಂತ ಚಿಂತ್ಯಾಗ ನನ ಮಗನಿಗಿ ಹುಚ್ಚು ಹಿಡಿತಲ್ಲ ಅಮತ ಕುಳಿತಲ್ಲೆ ಕಣ್ಣಿರಿನ ಹನಿ ಸಿರಿಮ್ಯಾಗಿಂದ ನೆ ತೊಯಸ್ತಿದ್ರ ಅರಿವಿಲ್ದೇ ಹಾಗೆ ಕುಳಿತಿದ್ದ ರಂಗಮ್ಮ ಅವ್ವ ಅವ್ವ ಅವ್ವ ಎನ್ನುವ ದ್ವನಿ ಕೇಳಿ ಬೆಚ್ಚಿ ಬಿದ್ದಳು.
ಇದ್ದಕ್ಕಿದ್ದಂತೆ ಎಚ್ಚರವಾದಾಗ ಕಣ್ಣುಬಿಟ್ಟು ನೋಡಿದರೆ ಗಡಿಯಾರದ ಮುಳ್ಳು ಆಗಲೆ ಒಂಬತ್ತಕ್ಕೆ ಬಂದಿತ್ತು. ಧಾವಿಸಿ ಎದ್ದ ರಂಗಮ್ಮ ಅಯ್ಯೋ ಮಗನಿಗೆ ಇನ್ನೂ ಮಾತ್ರೆನೆ ಕೊಟ್ಟಿಲ್ಲ ನನ್ನ ಬುದ್ದಿಗಿಷ್ಟು ಎಂದು ತನ್ನಷ್ಟಕ್ಕೆ ತಾನೆ ಗೊಣಗುತ್ತಾ ಮಾತ್ರೆ ತರಲು ಹೋದಳು.
ಸ್ವಾರ್ಥ ಸಂಕಲ್ಪದ ನಡುವಣ ಕೊಳ ಬಿಳುವುದು ಅರಿಯುವದರ ಹೊತ್ತಿಗೆ ರಘುವಿನ ಜೀವನ ಮಂಕಾಗಿ ಹೋಗಿತ್ತು.

Tuesday 19 January 2016

ಸರ್ಕಾರಿ ಪ್ರಯೋಗ ಶಾಲೆಗೆ ಶೈಕ್ಷಣಿಕ ವ್ಯವಸ್ಥೆ ಬಲಿ

 - ಮಹೇಶ ಕಲಾಲ

ಜಗತ್ತು ಶರವೇಗದಲ್ಲಿ ಸ್ಪರ್ಧೆಯಲ್ಲಿದೆ. ಜಗತ್ತಿನ ಪ್ರತಿಯೊಂದು ದೇಶಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈಯಲು ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತಂದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡುತ್ತಿವೆ. ಅವುಗಳಿಗೆ ಸ್ಪಷ್ಟ ಉದಾಹರಣೆ ಜಪಾನ್, ಚೀನಾ, ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಅಭಿವೃದ್ಧಿಯನ್ನ ಗಮನಿಸಬಹುದು.
ಹಲವು ರಾಷ್ಟ್ರಗಳು ಈಗ ಆನ್‍ಲೈನ್ ಶಿಕ್ಷಣದಲ್ಲಿ ಸಾಕಷ್ಟು ಸುದಾರಣೆ ತಂದುಕೊಂಡುದ್ದಲ್ಲದೆ. ರಾಕೆಟ್ ವೇಗದಲ್ಲಿ ಇಂಟರನೆಟ್ ವ್ಯವಸ್ಥೆಯನ್ನ ಅಳವಡಿಸಿಕೊಂಡು ಶಿಕ್ಷಣ ಕಲಿಯುವಿಕೆಯನ್ನ ಶಾಲೆ ಎಂಬ ಪ್ರಪಂಚದಿಂದ ಹೊರತಂದಿವೆ. ಆದರೆ ಭಾರತ ಮಾತ್ರ ಇನ್ನು ಆ ವ್ಯವಸ್ಥೆಯಿಂದ ಹೊರಬರಲು ಹಲವು ದಶಕಗಳೇ ಬೇಕಾಗಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇಲ್ಲಿ ಇನ್ನು ಹಲವು ಶಾಲೆಗಳಿಗೆ ಮೂಲ ಸೌಕರ್ಯವೇ ಸಿಕ್ಕಿಲ್ಲ ಅಂತಹುದರಲ್ಲಿ ಇಂಟರ್‍ನೆಟ್ ಅಳವಡಿಸುವಿಕೆ ದೂರದ ಮಾತಾಗಿದೆ. ಭಾರತದ ಶಿಕ್ಷಣ ವ್ಯವಸ್ಥೆ ಇನ್ನು ಶಾಲೆ ಎಂಬ ಬಾವಿಯನ್ನ ನಿರ್ಮಿಸಿಕೊಂಡು ಅದೇ ದೊಡ್ಡ ಪ್ರಪಂಚವೆನ್ನುವಂತೆ ಅದಕ್ಕೆ ಮೂಲಸೌಕರ್ಯ ಕಲ್ಪಿಸಲು ಒದ್ದಾಡುತ್ತಿದೆ. ಆದರೆ ಜಗತ್ತಿನ ಹಲವು ದೇಶಗಳು ತಮ್ಮ ಮಕ್ಕಳಿಗೆ ಮನೆಯಲ್ಲೆ ಕುಳಿತು ಶಿಕ್ಷಣ ಕಲಿಯುವಿಕೆಯೊಂದಿಗೆ ಜಗತ್ತಿನ ವೇಗಕ್ಕೆ ಮಕ್ಕಳ ಬುದ್ದಿ ಶಕ್ತಿ ಮತ್ತು ಕೌಶಲವನ್ನು ವೃದ್ಧಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುತ್ತಿವೆ ಈಗ ಹೇಳಿ ನಾವು ಜಗತ್ತಿನ ಶೈಕ್ಷಣಿಕ ವೇಗಕ್ಕೆ ಸಾಗಲು ಈ ಬಾವಿ ಎಂಬ ಶಿಕ್ಷಣ ಕೇಂದ್ರಗಳಿಂದ ಹೊರಬರದೆ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ಸಾಧ್ಯವಾ!
ನಮ್ಮ ದೇಶದಲ್ಲಿ ಇನ್ನು ಶೇ.50ರಷ್ಟು ಹಳ್ಳಿಗಳಿಗೆ 2ಜಿ ಇಂಟರ್‍ನೆಟ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಆದರೆ ಜಗತ್ತು 5ಜಿ.ಜತೆಗೆ ಇನ್ನು ಉನ್ನತ ತಂತ್ರಜ್ಞಾನದಿಂದ ವೇಗ ಹೆಚ್ಚಿಸಿಕೊಳ್ಳುವುದರತ್ತ ಯೋಚಿಸುತ್ತಿದೆ. ಇನ್ನು ಶೈಕ್ಷಣಿಕ ವ್ಯವಸ್ಥೆಗೆ ಬರೋಣ. ಜಗತ್ತಿನ ಹಲವು ರಾಷ್ಟ್ರಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರಲು ಉನ್ನತ ತಂತ್ರಜ್ಞಾನ ತರಲು ಯೋಚಿಸುತ್ತಿದ್ದರೆ ಭಾರತದಲ್ಲಿ ಶೇ.90ರಷ್ಟು ಶಾಲೆಗಳಿಗೆ ಇನ್ನು ಮೂಲಸೌಕರ್ಯ ಕಲ್ಪಿಸಲಾಗುತ್ತಿಲ್ಲ. ಅಲ್ಲಿ ಶುದ್ಧ ಕುಡಿವ ನೀರು, ವಿದ್ಯುತ್, ಮಕ್ಕಳಿಗೆ ಕುಳಿತು ಕೊಳ್ಳಲು ಕೋಣೆ ಕೂಡ ನಿರ್ಮಿಸಲಾಗಿಲ್ಲ. ಶೌಚಾಲಯವಂತು ಅದು ಕನಸಿನ ಮಾತು. ಸರ್ಕಾರ ಛಾಪೆ ಮೇಲೆ ಸಂಚರಿಸಿದರೆ ವ್ಯವಸ್ಥೆ ರಂಗೋಲಿ ಕೆಳಗೆ ಸಂಚರಿಸುತ್ತಿದೆ ಎನ್ನುವಂತೆ ಕೆಲವೊಂದು ಶಾಲೆಗಳಿಗೆ ಶೌಚಾಲಯ ನಿರ್ಮಿಸಿದರೆ ಅಲ್ಲಿ ನೀರಿಲ್ಲ, ಶೌಚಾಲಯವಂತು ನಿರ್ಮಿಸಲಾಗುತ್ತದೆ. ಆದರೆ ಅಲ್ಲಿ ನೀರು ಕೊಡದಿದ್ದರೆ ಹೇಗೆ ? ಶೌಚಾಲಯವೆಂದರೆ ಅದು ಉಪಯೋಗಿಸಬೇಕಲ್ಲವೇ. ಒಂದು ವೇಳೆ ಉಪಯೋಗಿಸಿದರೆ ಅದಕ್ಕೆ ನೀರು ಎಲ್ಲಿಂದ ತರಬೇಕು. ಬಿಸಿಯೂಟ ನೀಡಿದ ಸರ್ಕಾರ ಎಷ್ಟೋ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸದ್ದರಿಂದ ಅದು ಕೂಡ ವಿಫಲವಾಗುತ್ತಿದೆ ಎನ್ನುವ ಆರೋಪ ಇನ್ನು ದೂರವಾಗಿಲ್ಲ . ಆದರೆ ಶೌಚಾಲಯಕ್ಕೆ ನೀರು ಎಲ್ಲಿಂದ ತರಬೇಕು. ನೀರು ತಂದರೂ ಶೌಚಾಲಯವನ್ನು ಶುದ್ಧಗೊಳಿಸುವುದು ಯಾರೂ ಮಕ್ಕಳನ್ನು ಆ ಕೆಲಸಕ್ಕೆ ಹಚ್ಚುವಂಗಿಲ್ಲ. ಶಿಕ್ಷಕರೂ ಮಾಡುವಂತಿಲ್ಲ. ಹಾಗಾದರೆ ಅದು ತನ್ನಿಂದತಾನೆ ಶುದ್ಧವಾಗಲು ಸಾಧ್ಯವೇ? ಶೇ.70ರಷ್ಟು ಶಾಲೆಗಳಿಗೆ ಶಿಕ್ಷಕರನ್ನೆ ನೀಡದ ಸರ್ಕಾರ ಶೌಚಾಲಯಗಳನ್ನು ಶುದ್ಧಗೊಳಿಸಲು ಸೇವಕರನ್ನು ನೀಡುತ್ತದೇಯೇ. ಇಂದಿನವರೆಗೆ ಹಲವು ಶಾಲೆಗಳಿಗೆ ದಿನನಿತ್ಯವು ಶಿಕ್ಷಕರನ್ನು ನೇಮಿಸಬೇಕೆಂದು ಅಲ್ಲಿನ ಶಾಲೆಗಳ ಮಕ್ಕಳೆ ಬೀದಿಗಿಳಿದು ಹೋರಾಟ ಮಾಡುತ್ತಿರುವುದನ್ನು ನಾವು ಕಾಣುತ್ತಿz್ದÉೀವೆ. ಶೌಚಾಲಯ ಶುದ್ಧಗೊಳಿಸುವುದು ಯಾರೇಂಬ ಪ್ರಶ್ನೆಯ ಚರ್ಚೆ ಅಲ್ಲಿಗೆ ಅನವಶ್ಯಕ. ಈಗ ಹೇಳಿ ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ಶಾಲೆ ಕಲಿಯಬೇಕಿದೆ ಎನ್ನುವುದು ಎರಡು ಮಾತಿಲ್ಲ. ಅದರ ಜತೆಗೆ ಸರ್ಕಾರ ತನ್ನ ಹಲವು ಯೋಜನೆಗಳಿಗೆ ಶಾಲೆ ಮತ್ತು ಮಕ್ಕಳನ್ನ ಪ್ರಯೋಗಕ್ಕೆ ಬಲಿ ನೀಡುತ್ತಿರುವುದು ಕೂಡ ಸಾಮಾಜಿಕವಾಗಿ ಅಪಹಾಸ್ಯಕ್ಕೀಡಾದರೂ ಅದು ನಿರಂತರವಾಗಿ ನಡೆಯುತ್ತಿದೆ.
ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಪ್ರಯೋಗಿಸಲು ಇಲಿ ಸೇರಿದಂತೆ ಯಾವುದೇ ಪ್ರತಿರೋಧ ಒಡ್ಡದ ಪ್ರಾಣಿಗಳನ್ನು ಉಪಯೋಗಿಸಿಕೊಳ್ಳುತ್ತಿರುವುದು ಸರ್ವಕಾಲಿಕ ಸತ್ಯ. ಆದರೆ ನಮ್ಮ ರಾಜಕೀಯ ವ್ಯವಸ್ಥೆ ತಮ್ಮ ಕಾರ್ಯಕ್ಷೇತ್ರಗಳ ಬೆಳವಣಿಗೆಗೆ ಮತ್ತು ಚಟುವಟಿಕೆಗಳಿಗೆ ಶಾಲೆಗಳನ್ನೆ ರಂಗತಾಣಗಳನ್ನಾಗಿ ರೂಪಿಸಿಕೊಳ್ಳುತ್ತಿವೆ. ಮಹಾತ್ಮರ ಜಯಂತಿ, ಸರ್ಕಾರಿ ಯೋಜನೆಗಳು, ರಾಷ್ಟ್ರೀಯ ಹಬ್ಬಗಳು, ಚುನಾವಣೆಗೆ, ಜನ ಜಾಗೃತಿಗೆ ಹೀಗೆ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇವುಗಳಿಗೆಲ್ಲ ಶಾಲೆಗಳ ಕೋಣೆಗಳನ್ನು ಉಪಯೋಗಿಸಿಕೊಳ್ಳುವುದರ ಜತೆಗೆ ಶಿಕ್ಷಕರು ಮತ್ತು ಮಕ್ಕಳನ್ನು ಕೂಡ ಉಪಯೋಗಿಸಿಕೊಳ್ಳಲಾಗುತ್ತದೆ. ಅಷ್ಟೆ ಅಲ್ಲದೆ ರಾಜಕೀಯ ಮುಖಂಡರು ಹಾಗೂ ಸರ್ಕಾರಿ ಇಲಾಖೆಗಳ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳಿಗೆ ಗ್ರಾಮಗಳ, ಬಡಾವಣೆಗಳಿಗೆ ಭೇಟಿ ನೀಡುವಾಗ ಕಾರ್ಯಕ್ರಮ ಆಯೋಜಿಸಲು ಕೂಡ ಈ ಶಾಲೆಗಳೆ ಆಕರ್ಷಣೀಯ ಕೇಂದ್ರಗಳು. ಯಾಕೆಂದರೆ ಬೇರೆ ಕಡೆ ಕಾರ್ಯಕ್ರಮ ಆಯೋಜಿಸಬೇಕಾದರೆ ಜನರನ್ನು ಸೇರಿಸಬೇಕು ಈಗ ಅದು ಸುಲಭ ಸಾಧುವಲ್ಲ. ಆದ್ದರಿಂದ ಸುಲಭದಲ್ಲಿ ಒಳ್ಳೆಯ ಕಾರ್ಯಕ್ರಮ ಮಾಡುವುದರ ಜತೆಗೆ ಮೇಲಾಧಿಕಾರಿಗಳು ಮತ್ತು ಮುಖಂಡರಿಂದ ಪ್ರಶಂಸೆಗೆ ಪಾತ್ರರಾಗಬಹುದು ಎನ್ನುವುದು ಲೆಕ್ಕಾಚಾರ ಅದಕ್ಕಾಗಿ ಶೈಕ್ಷಣಿಕ ವ್ಯವಸ್ಥಯನ್ನ ಬಲಿ ಪಶು ಮಾಡಲಾಗುತ್ತಿದೆ ಎನ್ನುವುದು ಕೂಡ ಕಹಿ ಸತ್ಯ. ಈಗ ಹೇಳಿ ಇಷ್ಟೆಲ್ಲ ಅವಾಂತರಗಳ ಮಧ್ಯೆ ನಮ್ಮ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಸಾಧ್ಯನಾ. ಒಂದು ವೇಳೆ ಸುಧಾರಿಸಲು ನಡೆಸುತ್ತಿರುವ ಈ ಆಮೆ ವೇಗ ಜಗತ್ತಿನ ರಾಷ್ಟ್ರಗಳ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಪೈಪೆÇೀಟಿ ನೀಡಲು ಸಾಧ್ಯನಾ? ಇಷ್ಟಕ್ಕೆ ಸಾಕು ಅನಿಸುತ್ತಿದೆ. ಬರೆಯುತ್ತಾ ಹೋದರೆ ರಾಮಾಯಣ ಬಿಟ್ಟರೆ ಮಹಾಭಾರತ ಅಲ್ಲವಾ. ಶಿಕ್ಷಣ ಕೇತ್ರದಲ್ಲೂ ಕೂಡ ಒಂದು ಬಾರಿ ಕುರುಕ್ಷೇತ್ರ ನಡೆಯಲಿ ಎಂದು ಆಶಿಸುತ್ತಾ ವಿರಮಿಸೋಣ.

Sunday 20 September 2015

ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು



ಮೌಢ್ಯತೆಯ ಪೆÇರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು
 - ಮಹೇಶ ಕಲಾಲ್
ಮೌಢ್ಯತೆಯ ಪೆÇರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು  ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನಿಯೋಗಿಸುತ್ತಿರುವ ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿಯವರ ಸೇವಾಕಾರ್ಯ ಶ್ಲಾಘನೀಯವಾದದ್ದು.
ಕಸವು ರಸವಾಗಲಿ, ಧ್ಯೇಯೋz್ದÉೀಶಗಳು ಅದ್ವಿತೀಯ ಬೀಜಾಕ್ಷರಗಳಾಗಲಿ ಎಂಬ ದೃಷ್ಠಿಯಿಂದ ಪ್ರತಿಯೊಂದು ಕಾರ್ಯಕ್ಕೂ ಸಾಹಿತ್ಯ ಸೇವೆಯ ಅನುಪಮ ಅವಕಾಶವನ್ನು ಒದಗಿಸಿ, ಸಾಹಿತ್ಯ ಸೃಷ್ಠಿಯ ಜೊತೆಗೆ ವಾಗ್ದೇವಿಯ ವರಪುತ್ರರಿಗೆ ಆಹ್ವಾನವಿಯುತ್ತ ಇಳಿ ವಯಸ್ಸಿನಲ್ಲಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಸದಾ ತಾ ಮುಂದು ಎನ್ನುವು ಘೋಷಾ ವಾಕ್ಯದೊಂದಿಗೆ ಹಗಲಿರುಳೂ ಸೇವಾಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಅದಲು-ಬದಲು ಕಥಾ ಸಂಕಲನ ಸತ್ಯದ ದಾರಿ ಹುಡುಕ ಹೊರಟ ಹರಿಶ್ಚಂದ್ರನ ಪಾಡಿನಂತಿದೆ.
ಮಹಿಳೆಯನ್ನು ಇಳೆಯಷ್ಟು ಕ್ಷಮಾಗುಣ ಸಂಪನ್ನಳು ಎಂಬಂತೆ ಬಸವರಾಜ ಶಾಸ್ತ್ರಿಯವರು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಹಲವು ಕಥೆಗಳಲ್ಲಿ ಸ್ತ್ರೀ ಪ್ರಾಧ್ಯಾನ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುರುಷ ಪಾತ್ರಗಳ ಪ್ರಭಾವವಿದ್ದರೂ ಅಲ್ಲಿಯೂ ಮಹಿಳೆಯೇ ಕಥಾವಸ್ತುವನ್ನು ಪ್ರತಿನಿಧಿಸುತ್ತಾಳೆ. ಅವರ ಮಗ್ಗಲಿಗೆ ಬೇಕು ಮನೆಗೆ ಬೇಡ, ತ್ಯಾಗ, ವಾತ್ಸಲ್ಯ, ಅದಲು -ಬದಲು ಹೀಗೆ ತಮ್ಮ ಕತೆಗಳಲ್ಲಿ ಸ್ತ್ರೀಯನ್ನು ವಿಭಿನ್ನವಾಗಿ ಚಿತ್ರಿಸಿರುವುದು ಅವರ ಕಥಾಶೈಲಿಯಲ್ಲಿ ನಾವು ಕಾಣಬಹದು.
ಬಡತನವೆಂಬುದು ಜೇಡರ ಬಲೆ ಎಂಬ ಕಥಾ ವಸ್ತುವುಳ್ಳ ತ್ಯಾಗ ಕಥೆಯಲ್ಲಿ . ಶಿವನೇ ಇದೆಂತಹ ಪರೀಕ್ಷೆಯ ಕಾಲ. ಇವತ್ತು ಸಿಕ್ಕಿರುವುದು ಕೇವಲ ಅರ್ಧ ಸೇರು ಜೋಳ ಮಾತ್ರ. ಅದರಲ್ಲಿ ಮಾಡಿದ ಮೂರೇ ಮೂರು ರೊಟ್ಟಿಗಳನ್ನು ಆಗಲೇ ಮೂರು ಮಕ್ಕಳಿಗೆ ಹಂಚಿದ್ದಾಗಿದೆ. ಉಳಿದುದರಲ್ಲಿ ಅಂಬಲಿ ಕುದಿತಾ ಇದೆ. ಇದು ನನ್ನ ಮತ್ತು ಆ ಮಕ್ಕಳ ತಂದೆಯ ಪಾಲಿನದು ನಮ್ಮಿಬ್ಬರ ಪಾಲಿನದನ್ನು ಹಸಿದವಗೆ ಬಡಿಸುವ ಅಧಿಕಾರವಿದೆ. ಮೊದಲು ರೊಟ್ಟಿಯನ್ನು ಕೊಡದೆ ಕೇವಲ ಅಂಬಲಿಯನ್ನೇ ಬಡಿಸುವುದು ಹೇಗೆ ಎಂದು ಚಿಂತಿಸುತ್ತಾಳೆ.
ಅಂಬಲಿಯು ಬಡತನದ ಸಂಕೇತ. ಅದನ್ನು ತೋರ್ಪಡಿಸುವುದು ಆ ಮನೆಯೊಡತಿ ಅನ್ನಪೂರ್ಣಮ್ಮಳಿಗೆ ಬೇಕಿಲ್ಲ. ಬಡತನ ಸ್ವಾಭಿಮಾನದ ಬದುಕನ್ನು ಕಲಿಸುತ್ತದೆ. ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿಯಾಗಿದೆ. ಹಾಗಾಗಿ ಅನ್ನಪೂರ್ಣಮ್ಮಳು ತನ್ನ ಮಕ್ಕಳ ಕೈಯಲ್ಲಿನ ಒಂದೊಂದೆ ರೊಟ್ಟಿಯನ್ನು  ತೆಗೆದುಕೊಂಡು ಹೋಗಿ ಆ ರೈತನಿಗೆ ಊಟ ಮಾಡಲು ಕೊಡುತ್ತಾಳೆ. ಮಕ್ಕಳ ಕೈಯಿಂದ ರೊಟ್ಟಿ ತೆಗೆದುಕೊಂಡು ಅತಿಥಿಗೆ ಉಣ ಬಡಿಸುವುದು ಅನ್ನಪೂರ್ಣಮ್ಮಳ ಸ್ವಾಭಿಮಾನದ ಹೃದಯವನ್ನು ತೋರಿಸುತ್ತದೆ.
ಹಸಿವೆಯಿಂದ ಸಾಯುವಂತಾದರೂ ಜಾತಿ ಬಿಡಲೊಲ್ಲೆ ಎನ್ನುವ ಮಲ್ಲಪ್ಪನನ್ನು ಜಾತಿ ಎಂಬ ಪಾಷಾಣಕ್ಕೆ ಬಲಿಯಾದವನಂತೆ ಚಿತ್ರಿಸಿದ್ದರೂ ಅವನ ಮೂಲಕ ಮಠಾಧೀಶರು, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿ, ಇಂದಿನ ಸಮಾಜದಲ್ಲಿ ಜಾತಿ ಪ್ರಾದಾನ್ಯತೆ ಎಷ್ಟರಮಟ್ಟಿಗೆ ತನ್ನ ಪ್ರಭಾವವನ್ನು ಬೀರಿದೆ ಎಂಬುದನ್ನು ಇಲ್ಲಿ ಚಿತ್ರಿಸಿದ್ದಾರೆ.
ವಾತ್ಸಲ್ಯ ಎಂಬ ಕಥೆಯಲ್ಲಿ  ತಾಯಿ ಬೆಕ್ಕು ತನ್ನ ಮರಿಗಳಿಗೆ ಹಾಲುಣಿಸುವುದನ್ನು, ತದೇಕಚಿತ್ತದಿಂದ ನೋಡಿದ ಶಾಂತಮ್ಮನವರ ಮಾತೃ ಹೃದಯ. ಕೆಲವು ದಿನಗಳ ಹಿಂದೆ ಅಕಾಲಮರಣವನ್ನಪ್ಪಿದ ಮಗನನ್ನು ನೆನೆಸಿಕೊಂಡು ಕೊರಗುವಂತೆ. ತಾಯಿ ವಾತ್ಸಲ್ಯದ ಚಿತ್ರಣ ಚಿತ್ರಿಸಿದ್ದು , ಬಸವರಾಜ ಶಾಸ್ತ್ರಿಗಳು ಕಥೆಯಲ್ಲಿ ಅದೇಷ್ಟು ತಲ್ಲಿನರಾಗಿ ನಿಜ ಚಿತ್ರಣ ನೀಡಿದ್ದಾರೆಂದರೆ. ಸ್ವತಹಃ ಕಣ್ಣಾರೆ ಕಂಡದ್ದನ್ನು ತಮ್ಮ ಲೇಖನಿಯ ಮೂಲಕ ರಚಿಸಿದ್ದಾರೆ ಎನ್ನುವಂತೆ ಬಾಸವಾಗುತ್ತಿದೆ. ಇದು ಕಥೆಗಾರರ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ.
ತಾಯಿಯನ್ನು ವಾತ್ಸಲ್ಯಮಯಿ ಕರುಣಾಮಯಿ ಎನ್ನುವ ಮಾತನ್ನು ನಿಜಗೊಳಿಸಲೋಸುಗವೇ ಚಿತ್ರಿಸಿದ ಕಥೆಯಲ್ಲಿ ತಾಯಿಯ ಬಾಂಧವ್ಯವು ಮನೋಜ್ಞವಾಗಿ ರೂಪಿಸಿ ಬೆಕ್ಕಿಗೆ ಹಾಲುಣಿಸುವ ಮೂಲಕ ಪುತ್ರಶೋಕವನ್ನು ಮರೆಯುವಂತೆ ಮಾಡಿದ್ದಾರೆ.
ಮಗ್ಗಲಿಗೆ ಬೇಕು ಮನೆಗೆ ಬೇಡ ಎಂಬ ಕಥೆಯಲ್ಲಿ  ಹಿಂದೆ ಹಳ್ಳಿಗಳಲ್ಲಿ ಊರಗೌಡರ ದರ್ಪ ದಬ್ಬಾಳಿಕೆ ಹೇಗೆ ನಡೆಯುತ್ತಿತ್ತು. ಬಡತನದಲ್ಲಿರುವ ಹಳ್ಳಿಗರ ಪರಿಸ್ಥಿತಿ ಹೇಗೆ ದುರ್ಬಳಕೆಯಾಗುತ್ತಿತ್ತು ಎನ್ನುವ ಸನ್ನಿವೇಶಗಳನ್ನು ಕಥೆಗಾರರು ಪಾತ್ರಗಳ ಸಂಭಾಷಣೆಯಲ್ಲಿ ವ್ಯಕ್ತವಾಗುವ ಆಕ್ರೋಶಭರಿತ ನುಡಿಗಳಿಂದ ರಚಿಸಿದ್ದಾರೆ.
ಅರೆಮಲ್ಲಿ ಅದ್ಯಾಕೆ ಆಟು ದೂರ ನಿಂತಿ. ಇಲ್ಲಿ ಬಾ. ಎಂದಾಗ ಆ ಗೌಡ್ರೆ ನಾನಾ ಎಂದು ಆಶ್ಚರ್ಯಚಕಿತಳಾದ ಮಲ್ಲಿಗೆ. ಆ ನೀನೆ ಇಲ್ಲಿ ಯಾರು ಇಲ್ಲ. ನೀ ನಿಂತ ನೆಲದ ಮೇಲೆನೆ ನಾನು ನಿಂತಿದ್ದಿನಿ ಎಲ್ಲರೂ ಒಂದೆನೇ ಬಾ ಎಂದು ಮಲ್ಲಿಯ ಕೈಹಿಡಿದು ಎಳೆದಿದ್ದನ್ನು ಗೌಡರ ಬಾಯಿಂದ ಜಾತಿ ಸೂತಕ ಮಾನವ ನಿರ್ಮಿತ ಎನ್ನುವುದನ್ನು ಚಿತ್ರಿಸಿದ್ದಾರೆ.
ಅದಲು ಬದಲು ಕಥೆಯಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ಸಮರ ಸಾರಿದ್ದಾರೆ.
ಯಾವ ಸೌದೆಯಾದರೇನು ಎಂಬ ಕಥೆಯಲ್ಲಿ ಇಳಿವಯಸ್ಸಿನಲ್ಲೂ  ಕಥೆಯಲ್ಲಿ ರಸಿಕತೆಯ ತೋರಣವನ್ನ ನಿರ್ಮಿಸಿದ್ದಲ್ಲದೆ ಭಾರತೀಯ ಸಂಸ್ಕøತಿಯ ಪುನರುಜ್ಜೀವನಗೊಳಿಸಿದ್ದಾರೆ.
ತೃಪ್ತನಾದ ಮಲ್ಲಯ್ಯ ಎಂಬ ಕಥೆಯಲ್ಲಿ ಭಕ್ತ ಮತ್ತು ಭಕ್ತಿಯ ನಡುವಣ ಸಂಕೇತವೆಂಬಂತೆ ತೃಪ್ತನಾದ ಮಲ್ಲಯ್ಯ ಎಂಬುದರ ಮೂಲಕ ಭಕ್ತಿಯ ಮಾರ್ಗವನ್ನು  ತೋರಿಸಿದ್ದಾರೆ.
ಋಣಮುಕ್ತ ಕಥೆಯಲ್ಲಿ ಲಂಚದ ಆಮೀಷಕ್ಕೆ ಒಳಗಾಗದವರಿಗೆ ವರ್ಗಾವಣೆಯ ಶಿಕ್ಷೆಯಂತು ಖಂಡಿತಾ ಇದ್ದೆ ಇದೆ. ವ್ಯವಸ್ಥೆಯನ್ನ ನಿಯಂತ್ರಿಸುತ್ತಿರುವುದು ಗುಮಾಸ್ತಿ ವ್ಯವಸ್ಥೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ತ್ಯಾಗಮಯಿ ಭಿಕ್ಷುಕಿ ಕಥೆಯಲ್ಲಿ  ಭಿಕ್ಷೆಯ ಪರಿಯ ವರ್ಣನೆ ತ್ಯಾಗಮಯಿ ಭಿಕ್ಷುಕಿ ಕಥೆಯಲ್ಲಿ  ಸಮ್ಮಿಳಿತವಾಗಿದೆ. ಒಂದೊಂದು ರೀತಿಯಲ್ಲಿ ನಾವೇಲ್ಲರೂ ಭಿಕ್ಷುಕರೆ ಎಂಬುದನ್ನು ಸನ್ನಿವೇಶಗಳ ನಿರೂಪಣೆಯಿಂದ ಚಿತ್ರಿಸಿದ್ದಾರೆ.
ನಿಜ ಜೀವನದ ನೈಜ ಘಟನೆಗಳನ್ನ ಕಲ್ಪನೆಗಳ ಮೂಲಕ ಸೆರೆಹಿಡಿಯಬಲ್ಲ ಕಥಾ ಶೈಲಿಯಿಂದ ಲೇಖಕರು ತುಂಬಾ ಪಳಗಿದವರಂತೆ ಕಾಣುತ್ತಾರೆ. ಸಂಸ್ಕøತಿ ಮತ್ತು ಸಾಹಿತ್ಯದ ಒಳಹೊರಹನ್ನು ತಮ್ಮದೇ ಧಾಟಿಯ ಮೂಲಕ ಪ್ರಚುರಪಡಿಸುವಲ್ಲಿ ಲೇಖಕ ಬಸವರಾಜ ಶಾಸ್ತ್ರಿಗಳು ಅದಮ್ಯ ಉತ್ಸಾಹ ಚೇತನಶೀಲರಂತೆ ವರ್ತಿಸಿರುವುದು ಅವರ ಕಥೆಗಳಲ್ಲಿ ಕಂಡು ಬರುತ್ತದೆ.
ಜಗತ್ತಿನ ಇರುವಿಕೆಯನ್ನು ತೋರಿಸಲೋಸುಗ ಇರುವ ಏಕೈಕ ಮಾರ್ಗವೇ ಸಾಹಿತ್ಯ ಸೃಷ್ಠಿ ಎನ್ನಬಹುದು. ಪ್ರತಿಯೊಬ್ಬರು ಅನ್ನವನ್ನ ಸೃಷ್ಠಿಸಿಕೊಳ್ಳಬಹುದು, ಬಟ್ಟೆಯನ್ನ ನೆಯ್ದುಕೊಳ್ಳಬಹುದು ಆದರೆ ಸಾಹಿತ್ಯ ಹಾಗಲ್ಲ ಅದು ವಾಗ್ದೇವಿಯ ವರಪುತ್ರನಿಗೆ ಒಲಿದ ಕಾಯಕ ಅದನ್ನ ಬಸವರಾಜ ಶಾಸ್ತ್ರಿಗಳು ನಿರಂತರ ಸಾಹಿತ್ಯ ರಚನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಲೇಖಕರು ಕಥೆಯಲ್ಲಿ ಬರುವ ಪಾತ್ರಗಳನ್ನು ಅತಿ ಸಮೀಪದಿಂದ ನೋಡಿದ್ದಲ್ಲದೆ, ಆ ಪಾತ್ರಗಳು ಜೀವಂತ ಇವೆಯೋ ಎಂಬಂತೆ ಚಿತ್ರಿಸಿದ್ದಲ್ಲದೆ ಆ ಪಾತ್ರಗಳ ಸಂವಹನ ಕ್ರಿಯೆಯನ್ನ ಅಭಿವ್ಯಕ್ತಗೊಳಸಿದ್ದಾರೆ. ಲೇಖಕರ ದೂರದೃಷ್ಠಿ, ಪಾತ್ರಗಳ ಜೊತೆ ನಡೆಸುವ ಅವರ ಸಂಭಾಷಣೆಯ ಪರಿ ಸೂಜಿಗವೆನಿಸಿದರೂ ಕಥೆಯಲ್ಲಿ ಎಲ್ಲಿಯೂ ಯಾವೊಬ್ಬವ್ಯಕ್ತಿ ಸ್ವಾತಂತ್ರೃಕ್ಕೂ ನೋವಾಗದಂತೆ ಕಥೆಗಳಿಗೆ ಸಾಣೆಹಿಡಿದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹಿರಿಯರಾದ ಬಸವರಾಜ ಶಾಸ್ತ್ರಿಗಳು ತಮ್ಮದೇ ಧಾಟಿಯಲ್ಲಿ ಈ ಇಳಿ ವಯಸ್ಸಿನಲ್ಲಿ ಹಲವು ಲೇಖನ, ಕಥೆ, ಕವನ ಸಂಕಲನಗಳನ್ನು  ಪ್ರಕಟಿಸಿ ಸಾಹಿತ್ಯ ಸೇವೆಗೆ ಕಂಕಣಬದ್ಧರಾಗಿ ನಿಂತಿರುವುದು ಸಂತೋಷಕರ ಸಂಗತಿ. ಅವರ ಚಿಂತನಾ ಲಹರಿ ಇನ್ನೂ ಗಂಗೆಯಂತೆ ಹರಿಯಲಿ ಎಂದು ಆಶಿಸುತ್ತಾ ಗುರು ಹಿರಿಯ ಪಾದಕ್ಕೆ ಶರಣೆನ್ನುವೆ.

ಕಣ್ಣೀರ ಕಡಲಲಿ ಕೃಷಿಕನ ತವರು




ಕಣ್ಣೀರ ಕಡಲಲಿ ಕೃಷಿಕನ ತವರು


ನೇಗಿಲಯೋಗಿಯ ನೋಡಲ್ಲಿ 
ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ
ಅದರಲಿ ಹಾರಿ ಪ್ರಾಣವ ಬಿಟ್ಟನು

ಹತ್ತಿ, ಕಬ್ಬು ಬೆಳೆಯಲು ಅವನು
ಲಕ್ಷ ಸಾಲವ ಮಾಡಿಹನು
ಫೈರಿಗೆ ಹಚ್ಚಿದ ಬೆಂಕಿಯಲಿ
ಬೆಂದು ಭಸ್ಮವಾಗಿಹನು

ಸಾಲವ ಕೊಟ್ಟರು ಶೂಲವ ಕೊಟ್ಟರು
ಕೃಷಿಕನ ಬಾಳಿಗೆ ಬೆಂಕಿಯನಿಟ್ಟರು
ಕಣ್ಣೀರ ಕಡಲಲಿ ಕೃಷಿಕನ ತವರು


ಭಾಗ್ಯದ ಬೆನ್ನತ್ತಿರುವ ಸರ್ಕಾರಗಳು
ರೈತನ ಜೋಳಿಗೆ ಖಾಲಿಯಿಟ್ಟು 
ಹಂಗಿನ ಅರಮನೆ ಸೃಷ್ಠಿಸುತಿಹರು

ಪರಿಹಾರ ನೆಪದಿ ಭೇಟಿಯನ್ನಿತ್ತರು
ಮೊಸಳೆ ಕಣ್ಣೀರು ಸುರಿಸುತಿಹರು
ಪುಡಿಗಾಸು ನೀಡಿ ಪೆÇೀಸು ಕೊಟ್ಟು
ಪತ್ರಿಕೆಗಳಲಿ ರಾರಾಜಿಸುತಿಹರು

ಅನ್ನವ ಬೆಳೆವ ಅನ್ನದಾತನು
ಹಸಿವು ತಾಳದೆ ಆತ್ಮಹತ್ಯೆ ಹಾದಿ ಹಿಡಿದನು ...
ಸಾಲದ ಋಣವು ಶೂಲವಾಗಿ
ಬಾಳನು ನುಂಗಿತು ಮುಂದೆ ಸಾಗಿ
  - ಮೌನಯೋಗಿ
(ನನ್ನ ಮಾನಸ ಗುರು ಕವಿ ಕುವೆಂಪುರವರ ಕ್ಷಮೆ ಕೋರುತ್ತಾ)   

Tuesday 21 April 2015

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....

ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....
* ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದರೆ ನನ್ನಲ್ಲಿ ಇನ್ನು ಹೆಚ್ಚಿನ ಚೈತನ್ಯ ಇರುತ್ತದೆ ಎಂದು ಭಾವಿಸಿರುವವನು ನಾನು.
ನನ್ನ ಕೆಲವು ಗೆಳೆಯರು ಹೇಳುತ್ತಾರೆ ಅಲ್ಲೋ ದಿನಾಲೂ ಯಾವಗಲೂ ಪುಸ್ತಕ ಕೈಯಲ್ಲಿ ಹಿಡಿದಿರುತ್ತಿಯಲ್ಲ ಅದು ಕೊಳಕಾಗಿ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ನದಿಯ ಮಧ್ಯೆಯಲ್ಲಿರುವ ಕಲ್ಲು ನೀರಿನ ಹರಿವಿನ ಸೆಳೆತಕ್ಕೆ ಶಿಲೆಯಂತಾಗುವುದಿಲ್ಲವೇ. ಅದು ಪಾಚಿಗಟ್ಟಿದ ಮಾತ್ರಕ್ಕೆ ಕೊಳಕಾಗುವುದೇ.
ಸ್ವಚ್ಛ ಮತ್ತು ಸುಂದರವಾಗಿ ನಿರ್ಮಿಸಬೇಕಿರುವುದು ವ್ಯಕ್ತಿತ್ವವೇ ಹೊರತು ಪುಸ್ತಕವಲ್ಲ. ಪುಸ್ತಕ ಕೊಳಕಾಗುತ್ತದೆ (ಹಾಳಾಗದೆ) ಅಂತ ಅದನ್ನು ಹಾಗೆ ಇಟ್ಟಲ್ಲಿ ಅದರಲ್ಲಿನ ಸಂದೇಶವನ್ನು ಅರಿತುಕೊಳ್ಳುವುದು ಹೇಗೆ. ಪುಸ್ತಕ ಮನನವಾಗಬೇಕಿದ್ದಲ್ಲಿ ಅದನ್ನು ನಾವು ಉಪಯೋಗಿಸಲೇಬೇಕು. ಉಪಯೋಗಿಸಬೇಕೆಂದರೆ ಅದು ನಮ್ಮ ಬಳಿಯಲ್ಲಿರಬೇಕಲ್ಲವೇ.
ಇಂದಿನ ಒತ್ತಡದ ಜೀವನದಲ್ಲಿ ಓದುವುದಕ್ಕಾಗಿಯೇ ಸಮಯ ನಿಗದಿ ಮಾಡಲು ಸಾಧ್ಯವೇ. ಓದುವುದು ನಮ್ಮ ಹವ್ಯಾಸವಾಗಬೇಕೇ ವಿನಹಃ ಅದು ಕರ್ತವ್ಯವಾಗಬಾರದು. ಹಾಗಾಗಿ ಪುಸ್ತಕ ನಮ್ಮ ಬಳಿ ಇರಬೇಕು ಅಂದ ಮೇಲೆ ಅದು ಕೊಳಕಾಗದೆ (ಹಾಳಾಗದೆ)ಇರಲು ಸಾಧ್ಯವೆ. ಅಷ್ಟಕ್ಕೂ ಮಹಾತ್ಮರು ಸುಮ್ಮನೆ ಹೇಳಿದ್ದಾರೆಯೇ ಮೈಮೇಲೆ ಹರಕು ಬಟ್ಟೆ ಧರಿಸಿದ್ದರು ಪರವಾಗಿಲ್ಲ ಕೈಯಲ್ಲೊಂದು ಪುಸ್ತಕ ಇರಲಿ ಅಂತ.
ಮೊದಲು ಓದಿನ ಆಸಕ್ತಿ ಬೆಳೆಸಿಕೊಳ್ಳಲು ಪುಸ್ತಕ ಹಿಡಿದು ತಿರುಗುವುದನ್ನು ಅಭ್ಯಾಸ ರೂಢಿಸಿಕೊಳ್ಳೋಣ. ತದನಂತರ ಅದು ಜ್ಞಾನದ ಕಣಜವನ್ನು ನಮಗಾಗಿ ನೀಡುತ್ತದೆ. ಆಗ ಅದು ನಮ್ಮ ಏಳ್ಗೆಗೆ ಸಾಕಷ್ಟು ವ್ಯವಸ್ಥೆಯನ್ನು ತನ್ನಿಂತಾನೆ ಕಲ್ಪಿಸುತ್ತಾ ಹೋಗುತ್ತದೆ. ಇದೇ ಅಲ್ಲವೇ ನಿಜಕ್ಕೂ ಆಶ್ಚರ್ಯ ಎನ್ನುವುದು.
ಭಾರತದ ಜನಸಂಖ್ಯೆಯಲ್ಲಿ ಅಂದಾಜು ಶೇ.1ರಷ್ಟಾದರು ಕುಬೇರರಿದ್ದಾರೆ ಆದರೆ ಅವರ ಆಸ್ತಿ, ಅವರಿಗೆ ಸಿಕ್ಕ ಗೌರವಗಳ ಬಗ್ಗೆ ನಮ್ಮಲ್ಲಿ ಎಷ್ಟು ಜನರಿಗೆ ಮಾಹಿತಿ ಇದೆ. ಆದರೆ ಒಂದಂತು ಸತ್ಯ ಅದೆ ಸಾಹಿತಿ, ಲೇಖಕರ ಕೃತಿಗಳೆಷ್ಟು, ಅವರಿಗೆ ಸಿಕ್ಕ ಪ್ರಶಸ್ತಿ ಗೌರವ ಸನ್ಮಾನಗಳೆಷ್ಟು ಅಂತ ಕೇಳಿದರೆ ಸುಲಭದಲ್ಲಿ ನಮಗೆ ಉತ್ತರ ಸಿಗುತ್ತದೆ. ಈಗ ನಿವೇ ಹೇಳಿ ಇದರಲ್ಲಿ ಯಾವುದು ಶಾಸ್ವತ.
ಪ್ರತಿಯೊಬ್ಬರು ತಮ್ಮ ಮಕ್ಕಳು ಶಿಕ್ಷಣ ಕಲಿಯಲು ಮೊದಲು ಪ್ರಾರಂಭಿಸಿದಾಗ ಅಥವಾ ಉನ್ನತ ಶಿಕ್ಷಣಕ್ಕೆ ಹೋಗುವಾಗ ಮಕ್ಕಳಿಗೆ ಖುಷಿಯಾಗಲಿ ಅಂಥ ಬೈಕ್, ಕಾರು ಕೊಡಿಸುವ ಸಂಪ್ರದಾಯ ಬೆಳೆಯುತ್ತಿದೆ. ಇದು ಮಕ್ಕಳ ಮೇಲಿನ ವ್ಯಾಮೋಹದಿಂದಲ್ಲ ಬದಲಿಗೆ ನಮ್ಮ ಪ್ರತಿಷ್ಠೆಗೆ ಎನ್ನುವುದು ನನ್ನ ನಂಬಿಕೆ. ಇಂದು ಎಷ್ಟು ಜನ ತಮ್ಮ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ಹೋಗಲಿ ಗಣ್ಯ ಮಾನ್ಯರು, ಪ್ರೀತಿಪಾತ್ರರಿಗೆ ಗೌರವ ಕಾಣಿಕೆ ನೀಡುವಾಗ ನಾವೇನು ಮಾಡುತ್ತೇವೆ. ನೂರಾರು ರೂಪಾಯಿ ಖರ್ಚು ಮಾಡಿ ಹೂಗುಚ್ಛ ನೀಡುತ್ತೇವೆ. ಬಲಗೈಯಿಂದ ತೆಗೆದುಕೊಂಡು ಎಡಗೈಗೆ ಕೊಟ್ಟರೆ ಅದರ ಮಹತ್ವ ಮುಗಿಯಿತು. ಆದರೆ ಅದರ ಅರ್ಧ ಬೆಲೆ ನೀಡಿ ಯಾವುದಾದರೊಂದು ಪುಸ್ತಕ ಖರೀದಿಸಿ ನೀಡಿದರೆ. ಅದು ಅವರಿಗೆ ಉಪಯೋಗವಾಗದಿರಬಹುದು. ಅವರನ್ನೆ ನಂಬಿದ ಒಂದು ಗುಂಪಿರುತ್ತದಲ್ಲ ಅವರಿಗಾದರೂ ಪ್ರಯೋಜನಕ್ಕೆ ಬರಬಹುದಲ್ಲವೇ.
ನಾನು ಹೈಸ್ಕೂಲ್ ಸೇರಿದ ಪ್ರಾರಂಭದ ದಿನ ನಮ್ಮ ಹಳ್ಳಿಯಲ್ಲಿ ಆಗ ಹೈಸ್ಕೂಲ್ ಇರಲಿಲ್ಲ. ನಮ್ಮ ತಂದೆಯವರು ನನಗೆ ಕಾಣಿಕೆಯಾಗಿ ನೀಡಿದ್ದು ಏನು ಗೊತ್ತೆ ಎರಡು ಪುಸ್ತಕ ಒಂದು ಸಾಮಾನ್ಯಜ್ಞಾನ(ರಸಪ್ರಶ್ನೆಗಳದ್ದು), ಇನ್ನೊಂದು ವ್ಯಕ್ತಿತ್ವ ವಿಕಾಸದ್ದು . ಆಗ ನನಗೆ ಆಶ್ಚರ್ಯವಾಗಿ ಊರು ಬಿಟ್ಟು 40 ಕಿಲೋ ಮೀಟರ್ ದೂರ ಹೋಗುವವನಿಗೆ ಪುಸ್ತಕ ಕೊಡುತ್ತಿಯಲ್ಲ ಎಂದು ಪ್ರಶ್ನಿಸಿದೆ. ಪಠ್ಯ ಪುಸ್ತಕವೆ ಭಾರವಾಗಿರುವಾಗ ಅದಕ್ಕೆ ಇವೇರಡು ಸೇರಿಸಿದ ಎಂದು ಅಸಮಾಧಾನವ್ಯಕ್ತಪಡಿಸಿದೆ. ಆಗ ನಮ್ಮ ತಂದೆಯವರು ನನಗೆ ಹೇಳಿದ್ದು ಏನು ಗೊತ್ತೆ ! ಜೀವನದಲ್ಲಿ ನೀನು ಯಾರಿಗೂ ಭಾರವಾಗೋದು ಬೇಡ ಅಂದರೆ ಈಗ ನೀನು ಪುಸ್ತಕಗಳ ಭಾರ ಹೊರಲೇಬೇಕು ಅಂದು ಕಳುಹಿಸಿಕೊಟ್ಟಿದ್ದರು.
ಅವರು ನನಗೆ ಕೇವಲ ತಂದೆಯಾಗಿರಲಿಲ್ಲ ಸ್ನೇಹಿತ, ಗುರುವಾಗಿದ್ದರು. ಅವರ ಒಂದೊಂದು ಸಲಹೆ ಮಾರ್ಗದರ್ಶನ ಈಗ ನನಗೆ ಜೀವನದಲ್ಲಿ ಅತ್ಯುತ್ತಮ ಪಾಠಗಳಂತೆ ಕಂಡು ಬರುತ್ತಿವೆ. ಈಗ ಹೇಳಿ ಎಷ್ಟು ನಾವು ಎಷ್ಟು ಜನ ನಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ದಿನ ಬೆಳಗಿದರೆ ಸಾಕು ನಾವು ನಮ್ಮ ಕೆಲಸ ಬಿಡುವಿದ್ದಾಗ ಪ್ರತಿಷ್ಠೆಯ ಧ್ಯೂತಕವಾಗಿ ಮಕ್ಕಳನ್ನು ಕರೆದುಕೊಂಡು ಮಾರ್ಕೆಟ್‌ಗೆ ತೆರಳಿ ಏನಾದರೂ ಖರೀದಿಸುವುದು. ಅಥವಾ ಒಂದು ಸಣ್ಣ ಪ್ರವಾಸ ಇಲ್ಲವೆ ಒಂದು ಒಳ್ಳೆಯ ಹೊಟೇಲ್‌ನಲ್ಲಿ ಊಟ. ಇದರಿಂದ ನಾವು ನಮ್ಮ ಮಕ್ಕಳನ್ನು ವ್ಯವಹಾರದ ರೂವಾರಿಗಳನ್ನಾಗಿ ತಯಾರು ಮಾಡುತ್ತಿದ್ದೇವೆ. ಅಂದ ಮೇಲೆ ವೃದ್ಧಾಶ್ರಮ ಪದ್ಧತಿ ಹೆಚ್ಚಳವಾದಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ ಅವರಿಗೂ ಮುಂದೆ ಹೀಗೆ ಬಿಡುವಾದಾಗ ತಮ್ಮ ಮಕ್ಕಳ ಜೊತೆ ಕಾಲ ಕಳೆಯಬೇಕಾಗುತ್ತದೆ ವಯಸ್ಸಾದ ಅಪ್ಪ, ಅಮ್ಮಂದಿರ ಕಾಳಜಿಗೆ ಸಮಯವೆಲ್ಲಿರುತ್ತದೆ ಹೇಳಿ.
ಅದಕ್ಕಾಗಿ ಏನೇನೋ ಖರೀದಿಸಿ ವ್ಯರ್ಥ ಮಾಡುವ ಬದಲು ಪುಸ್ತಕ ಖರೀದಿಸಿ ಸಾಧ್ಯವಾದರೆ ಓದಿ, ಇಲ್ಲದಿದ್ದರೆ ಬೇರೆಯವರಲ್ಲಾದರೂ ಓದುವ ಹವ್ಯಾಸ ಬೆಳೆಸಲು ಇಂದಿನಿಂದ ಪಣತೊಡಿ.
ಜ್ಞಾನ ನಾವು ಸಮಾಜಕ್ಕೆ ಕೊಡುವ ಬಹುದೊಡ್ಡ ಆಸ್ತಿ. ಅದು ಶಾಸ್ವತವಾದದ್ದು, ಪ್ರಪಂಚದಲ್ಲಿ ಶ್ರೇಷ್ಠ ವ್ಯಕ್ತಿಗಳು ಬೆಳೆದು ಬಂದಿದ್ದು ಇದೇ ಹವ್ಯಾಸದಿಂದಲೆ. ಇದರಿಂದಲೆ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ನಾನೀಗ ಒಂದು ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎನ್ನುವ ನಂಬಿಕೆ ನನ್ನದು ನೀವೇನಂತರಿ.
- ಮೌನಯೋಗಿ